ಬೆಳಗಾವಿ ಮಹಾನಗರದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ ಈ ಬಾರಿ ಮತ್ತಷ್ಟು ಗರಿಗೆದರಿದ್ದು, ನಗರಬೀದಿ ಬೀದಿಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ಭಕ್ತಿ, ಸಡಗರ ಹಾಗೂ ಹಬ್ಬದ ವಾತಾವರಣ ಮನೆಮಾಡಿದೆ. ಗಣೇಶೋತ್ಸವದ ಹಿನ್ನೆಲೆಯಲ್ಲಿ ಇಡೀ ಬೆಳಗಾವಿ ಜಿಲ್ಲೆ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದು, ಭಕ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಈ ಬಾರಿ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ 7ಸಾವಿರಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.ಪ್ರತಿ ಬಡಾವಣೆ, ರಸ್ತೆ ಹಾಗೂ ಗ್ರಾಮಗಳಲ್ಲಿ ವಿಭಿನ್ನ ಕಲ್ಪನೆಗಳೊಂದಿಗೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ಹಬ್ಬದ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.
ಬೆಳಗಾವಿ ಮಹಾನಗರದ ಗಣೇಶೋತ್ಸವಕ್ಕೆ ಶತಮಾನಗಳಷ್ಟು ಭವ್ಯ ಇತಿಹಾಸವಿದೆ. ವಿಶೇಷವಾಗಿ ಮಹಾರಾಷ್ಟ್ರದ ಸಾಂಸ್ಕೃತಿಕ ಪರಂಪರೆಯ ಪ್ರಭಾವ ಹೊಂದಿರುವ ಬೆಳಗಾವಿಯಲ್ಲಿ ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಜನರನ್ನು ಒಗ್ಗೂಡಿಸುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಬ್ಬವಾಗಿಯೂ ರೂಪುಗೊಂಡಿದೆ. ಮುಂಬೈ ಹಾಗೂ ಮಹಾರಾಷ್ಟ್ರದ ಮಾದರಿಯಲ್ಲಿ ವಿವಿಧ ಗಣೇಶೋತ್ಸವ ಮಂಡಳಿಗಳು ಬೃಹತ ಹಾಗೂ ಆಕರ್ಷಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಭಕ್ತರ ಗಮನ ಸೆಳೆಯುತ್ತಿವೆ.
ಹಗಲು-ರಾತ್ರಿ ಎನ್ನದೆ ಗಣೇಶೋತ್ಸವ ಮಂಡಳಿಗಳ ಆವರಣದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಭಜನೆ, ಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಗಣೇಶೋತ್ಸವಕ್ಕೆ ಮತ್ತಷ್ಟು ಮೆರುಗು ಬಂದಿದೆ.
...........................
ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ
ಗಣೇಶೋತ್ಸವದ ಸಂಭ್ರಮದ ಜತೆಗೆ ಪರಿಸರ ಸಂರಕ್ಷಣೆಯ ಸಂದೇಶಕ್ಕೂ ಈ ಬಾರಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಬಾರಿ ಜಿಲ್ಲೆಯ್ಯದ್ಯಂತ ಸರ್ಕಾರಿ ಕಚೇರಿ, ಪೊಲೀಸ್ ಠಾಣೆ ಸೇರಿದಂತೆ ಮನೆಗಳಲ್ಲಿ 10 ಸಾವಿರಕ್ಕೂ ಅಧಿಕ ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮೂಲಕ ಜನರಲ್ಲಿ ಪರಿಸರ ಸ್ನೇಹಿ ಆಚರಣೆಗೆ ಜಾಗೃತಿ ಮೂಡಿಸಲಾಗುತ್ತಿದೆ.
ಗಣೇಶೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಬಡಾವಣೆಗಳು ವಿದ್ಯುತ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಬೃಹತ್ ಗಣೇಶ ಮೂರ್ತಿಗಳು, ವಿಶಿಷ್ಟ ಅಲಂಕಾರಗಳು, ಪೆಂಡಾಲ್‌ಗಳು ಹಾಗೂ ವಿವಿಧ ವಿಷಯಾಧಾರಿತ ಅಲಂಕಾರಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಸಂಜೆಯಾಗುತ್ತಿದ್ದಂತೆ ಗಣೇಶೋತ್ಸವ ಮಂಡಳಿಗಳ ಸುತ್ತ ಜನಸಂದಣಿ ಹೆಚ್ಚಾಗುತ್ತಿದ್ದು, ಕುಟುಂಬ ಸಮೇತರಾಗಿ ಜನರು ಗಣೇಶನ ದರ್ಶನ ಪಡೆಯುತ್ತಿದ್ದಾರೆ. ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವರ್ಗದ ಜನರು ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.