ಕೊಕಟನೂರ ಯಲ್ಲಮ್ಮದೇವಿ ಜಾತ್ರೆಯಲ್ಲಿ ಭಕ್ತರು ಭಂಡಾರದಲ್ಲಿ ಮಿಂದೆದ್ದಿರುವುದು. 
ಬೆಳಗಾವಿ

ಭಂಡಾರದಲ್ಲಿ ಮಿಂದೆದ್ದ ಯಲ್ಲಮ್ಮನ ಭಕ್ತರು

ಪ್ರಮುಖ ಮುಖ್ಯಾಂಶಗಳು

  • ಕೊಕಟನೂರು ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ
  • ಪಲ್ಲಕ್ಕಿ ಮೆರವಣಿಗೆ
ಅಥಣಿ ಗ್ರಾಮೀಣ: ಭಂಡಾರದೋಕುಳಿ, ತೃತೀಯಲಿಂಗಿಗಳ ಕುಣಿತ, ಯಲ್ಲಮ್ಮ ನಿನ್ನ ಪಾದಕ್ಕೆ ಉಧೋ-ಉಧೋ ಜೈಕಾರಗಳ ಮಧ್ಯೆ ಅಥಣಿ ತಾಲೂಕಿನ ಸುಕ್ಷೇತ್ರ ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತಮಿಳುನಾಡು ಮತ್ತು ತೆಲಂಗಾಣ ಸೇರಿ ಅನೇಕ ರಾಜ್ಯಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ೫ ಗಂಟೆಗೆ ಸೇವಕರು ಅರ್ಚಕರೊಂದಿಗೆ ಸೇರಿ ದೇವಿ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮೂಲಕ ಜಗ ಹೊತ್ತು ಜೋಗುಳಬಾವಿ ಸತ್ಯವ್ವನ ದೇವಸ್ಥಾನಕ್ಕೆ ತೆರಳಿ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿದರು. ಬಳಿಕ ದೇಸಾಯಿವಾಡೆಗೆ ಪಲ್ಲಕ್ಕಿ ಬಂದ ಬಳಿಕ ದೇಸಾಯಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಂದ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳ, ಚೌಡಕಿ, ಶಹನಾಯಿ ಕಲಾವಿದರೊಂದಿಗೆ ಮೆರವಣಿಗೆ ಮೂಲಕ ದೇವಿ ಜಗದ ಮನೆಗೆ ಬಂದು ಅರ್ಚಕ ಕುಟುಂಬಸ್ಥರಿಂದ ಪೂಜೆ ಸಲ್ಲಿಸಲಾಯಿತು. ಮರಳಿ ದೇವಸ್ಥಾನಕ್ಕೆ ಹೋಗಿ ದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಅಗ್ನಿ ಪ್ರವೇಶಕ್ಕಾಗಿ ಕುಂಡಕ್ಕೆ ತೆರಳುವ ವೇಳೆ ರೇಣುಕಾ ಯಲ್ಲಮ್ಮದೇವಿ ಮಂಗಳಸೂತ್ರ ವಿಸರ್ಜನೆ ಮಾಡಿ ಉದ್ಭವಮೂರ್ತಿ ಹಸಿರು ಅರಿವೆಯಿಂದ ಮುಚ್ಚಿದ ಬಳಿಕ ದೇವಸ್ಥಾನದ ಬಾಗಿಲು ಮುಚ್ಚಲಾಯಿತು.
ಭಂಡಾರ ಸಂಭ್ರಮ: ಅಗ್ನಿ ಕುಂಡಕ್ಕೆ ತೆರಳುವಾಗ ಭಕ್ತರು ಪಲ್ಲಕ್ಕಿ ಹಾಗೂ ಜಗಗಳಿಗೆ ಭಂಡಾರ ಎರಚಿ ದೇವಿ ನಾಮಸ್ಮರಣೆ ಮಾಡಿದರು. ಅಗ್ನಿಗೆ ಅಭಿಷೇಕ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅರ್ಚಕ ಧರ್ಮಪ್ಪ ಪೂಜಾರಿ ಅಗ್ನಿ ಪ್ರವೇಶಿಸಿದರು. ಕಲಾ ತಂಡಗಳು ಉತ್ಸವದ ಮೆರುಗು ಹೆಚ್ಚಿಸಿದವು. ತೃತೀಯಲಿಂಗಿಗಳ ಕುಣಿತ ಎಲ್ಲರನ್ನೂ ನಾಚಿಸುವಂತೆ ಮಾಡಿತು. ಭಕ್ತ್ತಿಯ ಭಂಡಾರದಿಂದ ದೇವಸ್ಥಾನದ ಪ್ರಾಂಗಣವೆಲ್ಲ ಭಂಡಾರಮಯವಾಗಿತ್ತು. ಭಕ್ತರು ಪರಸ್ಪರ ಭಂಡಾರ ಎರಚಿ ಸಂಭ್ರಮಿಸಿದರು.

ಶಕ್ತಿದೇವತೆ ಕೊಕಟನೂರ ಶ್ರೀ ರೇಣುಕಾ ಯಲ್ಲಮ್ಮದೇವಿ ನಂಬಿ ಬಂದ ಭಕ್ತರ ಕಷ್ಟ ದೂರ ಮಾಡಲಿ. ರಾಜ್ಯ ಸೇರಿ ಹೊರರಾಜ್ಯದ ಅನೇಕ ಭಕ್ತರು ದೇವಿ ಜಾತ್ರೆಗೆ ಆಗಮಿಸುತ್ತಾರೆ. ಯಲ್ಲಮ್ಮದೇವಿ ಭಕ್ತರು ಬೇಡಿದ್ದನ್ನೆಲ್ಲ ಕೊಡುವ ಕರುಣಾಮಯಿ ಆಗಿದ್ದಾಳೆ.