ಖಾನಾಪುರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಡೆಸ್ಕ್ ವಿತರಣೆ ಕಾರ್ಯಕ್ರಮ ಜರುಗಿತು. ಶಾಂತಾ ಆಚಾರ್ಯ, ಎಂ.ಕೆ.ಹೆಗಡೆ, ಸುಮಾ ಹೊಂಡದ ಇತರರಿದ್ದರು.
ಬೆಳಗಾವಿ:ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ದೇಣಿಗೆ ರೂಪದಲ್ಲಿ ಡೆಸ್ಕ್‌ಗಳನ್ನು ನೀಡಲಾಗುತ್ತಿದೆ ಎಂದು ಪ್ರಯತ್ನ ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ ಹೇಳಿದರು.
ಖಾನಾಪುರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಡೆಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಹೊಂದಬೇಕು. ಗಾಯನ, ನೃತ್ಯ, ಚಿತ್ರಕಲೆ, ಕ್ರೀಡೆ, ಸಾಹಿತ್ಯ, ಸಂಗೀತ, ಭಾಷಣ, ನಾಟಕ ಮತ್ತಿತರ ತಮ್ಮಿಷ್ಟದ ಮತ್ತು ತಮ್ಮಲ್ಲಿ ಅಡಗಿರುವ ಕಲೆಯನ್ನು ಆವಿಷ್ಕಾರಗೊಳಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದರು.
ಹಿರಿಯ ಪತ್ರಕರ್ತ ಎಂ.ಕೆ ಹೆಗಡೆ ಮಾತನಾಡಿ, ಪ್ರತಿಯೊಬ್ಬರೂ ತಾವು ಕಲಿತ ಶಾಲೆಗೆ, ಕಾಲೇಜಿಗೆ, ಊರಿಗೆ, ಶಿಕ್ಷಕರಿಗೆ ಮತ್ತು ವಿಶೇಷವಾಗಿ ಹೆತ್ತವರಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕು. ತಾವು ದೊಡ್ಡವರಾದ ಮೇಲೆ ತಮ್ಮನ್ನು ಈ ಮಟ್ಟಕ್ಕೆ ತಂದ ಸಮಾಜಕ್ಕೆ ತಮ್ಮ ಕೈಲಿಂದ ಸಾಧ್ಯವಾದ ಸಾಮಾಜಿಕ ಕಾರ್ಯ ಮಾಡುವುದನ್ನು ಮರೆಯಬಾದರು ಎಂದರು.
ಪ್ರಯತ್ನ ಸಂಘಟನೆಯ ಸದಸ್ಯರಾದ ಸುಮಾ ಹೊಂಡದ, ಲತಾ ಕಟ್ಟಿ, ಶೀಲಾ ದೇಶಪಾಂಡೆ, ವೀಣಾ ಕುಲಕರ್ಣಿ, ಶುಭಾ ಕಡಗದಕೈ, ವರದಾ ಭಟ್, ಪದ್ಮಾ ವೇರ್ಣೇಕರ, ಬೀನಾ ರಾವ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸನ್ನ ಕುಲಕರ್ಣಿ, ಪ್ರಾಚಾರ್ಯ ಎಸ್.ಕೆ ಅಕಿವಾಟ, ಎಫ್.ಡಿ ತಳವಾರ, ಎಸ್.ಎಸ್.ಚಿಂಚಣಿ ಇತರರಿದ್ದರು.