ಬೆಳಗಾವಿಯಲ್ಲಿ ಶುಕ್ರವಾರ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರಗೆ ಮನವಿ ಸಲ್ಲಿಸಲಾಯಿತು. 
ಬೆಳಗಾವಿ

ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಲು ಆಗ್ರಹ

ಬೆಳಗಾವಿ : ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಗೃಹ ಸಚಿವ ಡಾ.ಜಿ.ಪರಮೇಶ್ವರರಿಗೆ ಮನವಿ ಸಲ್ಲಿಸಿದರು.
ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಗೆ ಧಕ್ಕೆ ಬಂದಾಗ, ಕನ್ನಡದ ಹಿತವನ್ನು ಕಾಯುವ ನಿಟ್ಟಿನಲ್ಲಿ ಹೋರಾಟ ಮಾಡಿದ ರಾಜ್ಯದ ನೂರಾರು ಕನ್ನಡಪರ ಹೋರಾಟಗಾರರ ಮೇಲೆ ಸಾವಿರಾರು ಮೊಕದ್ದಮೆಗಳು ದಾಖಲಾಗಿದ್ದು, ಇವುಗಳನ್ನು ಕಾನೂನಾತ್ಮಕವಾಗಿ ಹಿಂಪಡೆದು, ನಾಡಿನ ಹಿತದೃಷ್ಟಿಯಿಂದ ರದ್ದುಗೊಳಿಸಬೇಕು. ಈ ಸಂಬಂಧ ಈಗಾಗಲೇ ತಮಗೂ ಹಾಗೂ ಮುಖ್ಯಮಂತ್ರಿಗೂ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ, ನಮ್ಮ ಮನವಿಗೆ ಇಲ್ಲಿಯವರೆಗೆ ಸೂಕ್ತ ಸ್ಪಂದನೆ ದೊರೆತಿಲ್ಲ ಹಾಗೂ ಅದು ಕೇವಲ ಭರವಸೆಯಾಗಿಯೇ ಉಳಿದಿದ್ದು, ಆದ್ಯತೆ ಮೇರೆಗೆ ಪರಿಗಣಿಸುವಂತೆ ಆಗ್ರಹಿಸಿದರು.
ದೀಪಕ ಗುಡಗನಟ್ಟಿ, ಗಣೇಶ ರೋಕಡೆ, ಲೋಕೇಶ ರಾಠೋಡ, ಅರ್ಜುನ ಕಾಂಬಳೆ, ಗಂಗಾರಾಮ ಶೀಗಿಹಳ್ಳಿ, ನಾಗರಾಜ ಲಕ್ಕಪ್ಪಗೊಳ, ವಿರೇಶ ಹುನಶಿಮರದ ಇತರರಿದ್ದರು.