ಬೆಳಗಾವಿಯಲ್ಲಿ ಸೋಮವಾರ ಕೃಷಿಕ ಸಮಾಜ ರಾಜಾಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿದರು. ಸಂಜೀವ ಡೊಂಗರಗಾವಿ, ಶೇಖರ ಅಕ್ಕರಗಾವಿ, ಶಿವಲೀಲಾ ಮೀಸಾಳೆ ಇತರರಿದ್ದರು. 
ಬೆಳಗಾವಿ

ಕೃಷಿ ಭವನ ಕಟ್ಟಡ ಸರ್ಕಾರದ ಸುಪರ್ದಿಗೆ ಪಡೆಯಲು ಆಗ್ರಹ

ಬೆಳಗಾವಿ: ಕೃಷಿಗೆ ಸಂಬಂಧಿಸಿದ ವಾಣಿಜ್ಯ ಬಳಕೆಯ ಷರತ್ತಿಗೊಳಪಟ್ಟು ಬಾಡಿಗೆ ಪಡೆದುಕೊಂಡಿರುವ ನಗರದ ಕೇಂದ್ರ ಬಸ್ ನಿಲ್ದಣ ಎದುರಿನ ಕೃಷಿ ಭವನವನ್ನು ಮದ್ಯದ ಅಂಗಡಿ ಸೇರಿದಂತೆ ಅನ್ಯ ವಾಣಿಜ್ಯ ಬಳಕೆಗೆ ಬಳಸಲಾಗುತ್ತಿದ್ದು, ನಿಯಮ ಉಲ್ಲಂಘಿಸಿರುವ ಕಟ್ಟಡವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯಬೇಕು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಕಟ್ಟಡವನ್ನು 1966ರ ಮಾ.10ರಂದು ಮಾಸಿಕ ಬಾಡಿಗೆ ಅಡಿಯಲ್ಲಿ 99 ವರ್ಷಗಳ ಅವಧಿಗೆ ನೇಮಿನಾಥ ಹನಮಣ್ಣವರಿಗೆ ನೀಡಿದ್ದಾರೆ. ಸದ್ಯ ನೇಮಿನಾಥ ಅವರಿಲ್ಲ. ಈಗಿರುವ ಕಟ್ಟಡದ ಮೇಲೆ ಅವರ ಮಕ್ಕಳು ಮಾಲೀಕತ್ವ ಸಾಧಿಸುತ್ತಿದ್ದು, ಇದು ಕುಟುಂಬದ ಆಸ್ತಿಯಲ್ಲ. ಹೀಗಾಗಿ, ಸರ್ಕಾರ ವಂಶಸ್ಥರಿಗೆ ಕೊಡುವ ಬದಲಿಗೆ ಮರಳಿ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಕಟ್ಟಡವನ್ನು ಗುತ್ತಿಗೆಗೆ ಕೊಡುವಾಗ ಕೋಲ್ಡ್ ಸ್ಟೋರೇಜ್, ಮಣ್ಣಿನ ಗುಣ ಪರೀಕ್ಷಾ ಕೇಂದ್ರ, ರೈತರಿಗಾಗಿ ವಿಶ್ರಾಂತಿ ಗೃಹ, ಕೃಷಿ ಯಂತ್ರೋಪಕರಣ, ಕೃಷಿ ಪರಿಕರ ಹಾಗೂ ರೈತರ ಕೃಷಿಗೆ ಸಂಬಂಧಿಸಿದ ನಿತ್ಯ ಪಯೋಗಿಸುವ ಸಾಮಗ್ರಿಗೆ ಮಾತ್ರ ಸಿಮೀತಗೊಳಿಸಿ ಷರತ್ತು ವಿಧಿಸಲಾಗಿತ್ತು. ಇದರ ವಿರುದ್ಧ ಭಾರತೀಯ ಕೃಷಿಕ ಸಮಾಜ 2016ರಿಂದ ನಿರಂತರವಾಗಿ ಹೋರಾಟ ಮಾಡುತ್ತ ಬರಲಾಗಿದ್ದು, ಸಂಬಂಧಿತ ಇಲಾಖೆಯ ಅಧಿಕಾರಿಗಳು ಮಾತ್ರ, ತಮ್ಮದೇ ಕಟ್ಟಡವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಆಸಕ್ತಿ ತೊರುತ್ತಿಲ್ಲ ಎಂದು ಆರೋಪಿಸಿದರು.
ಈ ಕಟ್ಟಡದಲ್ಲಿ ನಿಯಮಗಳನ್ನು ಮೀರಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಅನುಮತಿ ನೀಡಲಾಗಿದೆ. ಮೂಲ ಬಾಡಿಗೆದಾರರು ಇಡೀ ಕಟ್ಟಡವನ್ನು ಬೇರೆಯವರಿಗೆ ಉಪಬಾಡಿಗೆ ನೀಡಿದ್ದಾರೆ. ಅಧಿಕಾರಿಗಳು ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡಿದ್ದರಿಂದ ನೇಮಿನಾಥರ ಮಕ್ಕಳು, ನ್ಯಾಯಾಲಯದಿಂದ ತಡೆಯಾಜ್ಞೆ ಸಹ ತಂದಿದ್ದು, ನಿಯಮ ಉಲ್ಲಂಘಿಸಿರುವ ವಿಷಯವನ್ನು ಇಲಾಖೆಯವರು ಕೋರ್ಟ್ ಗಮನಕ್ಕೆ ತಂದು ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಬೇಕು ಎಂದು ಮನವಿ ಮಾಡಿಕೊಂಡರು.
ಸಂಜೀವ ಡೊಂಗರಗಾವಿ, ಮಲ್ಲಿಕಾರ್ಜುನ ಡೊಂಗರಗಾವಿ, ಶೇಖರ ಅಕ್ಕನವರ, ಈರಪ್ಪ ಪಟ್ಟಿಹಾಳ, ಶಿವಲೀಲಾ ಮೀಸಾಳೆ ಸುದ್ದಿಗೋಷ್ಠಿಯಲ್ಲಿದ್ದರು.