ಪಡಿತರ ವಿತರಣೆಯ ಸರ್ವರ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪಡಿತರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ : ಪಡಿತರ ವಿತರಣೆಯಲ್ಲಿ ಪದೇ ಪದೇ ಎದುರಾಗುತ್ತಿರುವ ಸರ್ವರ್ ಸಮಸ್ಯೆ ಬಗೆಹರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಸೋಮವಾರ ಎದುರು ಪ್ರತಿಭಟಿಸಿದ ರಾಜ್ಯ ಸರ್ಕಾರಿ ಪಡಿತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದವರು, ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ರಿಗೆ ಸಲ್ಲಿಸಿದರು.
ಏಪ್ರಿಲ್, ಮೇ ತಿಂಗಳ ಪಡಿತರವನ್ನು ಒಂದೇ ಸಲ ಕೊಡಲಾಗುತ್ತಿದೆ. ಇದಕ್ಕಾಗಿ ಪಡಿತರ ಚೀಟಿದಾರರಿಂದ ಎರಡು ಬಾರಿ ಬೆರಳಚ್ಚು ಪಡೆಯಲಾಗುತ್ತಿದೆ. ಆದರೆ, ಸರ್ವರ್ ಸಮಸ್ಯೆ ಉದ್ಭವಿಸಿದ್ದರಿಂದ ಬೆರಳಚ್ಚು ಪಡೆಯಲು ತಡವಾಗುತ್ತಿದೆ. ಇದರಿಂದ ಜಿಲ್ಲೆಯ 1,765 ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನೂ ಶೇ.60ರಷ್ಟು ಪಡಿತರ ವಿತರಣೆ ಆಗಿಲ್ಲ. ಇದನ್ನು ಪರಿಹರಿಸಲು ಒಬ್ಬ ವ್ಯಕ್ತಿಯಿಂದ ಒಂದೇ ಸಲ ಬೆರಳಚ್ಚು ಪಡೆಯುವ ವ್ಯವಸ್ಥೆ ಜಾರಿಗೆ ತರಬೇಕು. ಸರ್ವರ್ ಸಮಸ್ಯೆಗೆ ಇರುವ ಎಲ್ಲ ಅಡೆತಡೆ ನಿವಾರಿಸಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜಶೇಖರ ತಳವಾರ, ದಿನೇಶ ಬಾಗಡೆ, ಶಾಂತಿನಾಥ ಬುಡವಿ, ಉಮಾ ಸೋನವಾಡಕರ, ಬಾಳು ಪಾಟೀಲ, ಬಸವರಾಜ ದೊಡಮನಿ ಇತರರಿದ್ದರು.