ವಿವಿಧ ಬೇಡಿಕೆ ಈಡೇರಿಸಲು ಮಲಾಬಾದ ಗ್ರಾಮದಲ್ಲಿ ರೈತರು ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಎಂ.ಸಿ.ತಂಬೋಳಿ, ಪ್ರಕಾಶ ಪೂಜಾರಿ, ಚನ್ನಪ್ಪ ಕುಲ್ಲೋಳಿ, ಸೋಮಯ್ಯ ಹಿರೇಮಠ ಇತರರಿದ್ದರು. 
ಬೆಳಗಾವಿ

ಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ

ವಿದ್ಯಾ ಶೆಟ್ಟನಗೌಡ್ರ

ಸಂಬರಗಿ:

ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಲುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಮಲಾಬಾದ, ಬಾಳಿಗೇರಿ, ಬೇವನೂರ, ಗುಂಡೇವಾಡಿ ಗ್ರಾಮಗಳಿಗೆ ನೀರು ಒದಗಿಸಬೇಕು. ಕಾಲುವೆಗೆ ಭೂಮಿ ನೀಡಿದವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮಲಾಬಾದ ಗ್ರಾಮದಲ್ಲಿ ರೈತ ಸಂಘಟನೆ ಮತ್ತು ಚಿಂತಕ ವೇದಿಕೆ ಸದಸ್ಯರು ಅಥಣಿ-ಡವಳಾಪುರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.

ರೈತ ಸಂಘಟನೆ ಅಧ್ಯಕ್ಷ ಎಂ.ಸಿ.ತಂಬೋಳಿ, ರೈತ ಮುಖಂಡ ಪ್ರಕಾಶ ಪೂಜಾರಿ ಮಾತನಾಡಿ, ೨೦೧೩ರಲ್ಲಿ ಕಾಮಗಾರಿ ಪ್ರಾರಂಭವಾಗಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿಠ್ಠಲ ದೇವಸ್ಥಾನದಲ್ಲಿ ಗ್ರಾಮಸ್ಥರು, ರೈತ ಸಂಘದವರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಸಕಾಲದಲ್ಲಿ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಕುರಿತು ನಿರ್ಣಯಿಸಿದರು.
ಚನ್ನಪ್ಪ ಕುಲ್ಲೋಳಿ, ಸೋಮಯ್ಯ ಹಿರೇಮಠ, ಕಾಕಾಸಾಹೇಬ ಚೌಗುಲೆ, ಬಾಬು ಜತ್ತಿ, ಡಿ.ಎಂ.ನಾಯಕ, ಲಕ್ಷ್ಮಣ ಕೋಳಿ, ಮಲ್ಲಪ್ಪ ಕಲ್ಲೋಳಿ, ಮುರುಘೇಂದ್ರಪ್ಪ ಅರ್ಜುನಗಿ, ಬಿಳಿಯಾನಿ ನಾಯಕ, ಚನ್ನಪ್ಪ ಕಲ್ಲೋಳಿ, ಮಾರುತಿ ತೋಡ್ಕರ ಇತರರು ಇದ್ದರು.