ಚಚಡಿ ಗ್ರಾಮದಲ್ಲಿ ಮದ್ಯದಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಕಾರಿ ಕಚೇರಿ ಎದುರು ಮಹಿಳೆಯರು ಪ್ರತಿಭಟನೆ ನಡೆಸಿದರು. ಚನ್ನವ್ವ ಖನಗಾವಿ, ಈರವ್ವ ಯಕ್ಕುಂಡಿ, ಗಂಗವ್ವ ಸೋಮನ್ನವರ ಇತರರಿದ್ದರು.
ಬೆಳಗಾವಿ: ಎಂಎಸ್‌ಐಎಲ್ ಮದ್ಯದ ಅಂಗಡಿ ಹಾಗೂ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದು ಆಗ್ರಹಿಸಿ ಸವದತ್ತಿ ತಾಲೂಕಿನ ಚಚಡಿ ಗ್ರಾಮಸ್ಥರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೊದಲು ಜಿಲ್ಲಾಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಡಿಸಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಹಾಗೂ ಅಬಕಾರಿ ಇಲಾಖೆ ಕಚೇರಿಗೂ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರು ನಮ್ಮೂರಿನ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ಕೂಡಲೇ ಮದ್ಯದಂಗಡಿ ಬಂದ್ ಮಾಡಲು ಕ್ರಮವಹಿಸಿ ಎಂದು ಒತ್ತಾಯಿಸಿದರು.
ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಚಚಡಿ ಐತಿಹಾಸಿಕ ಗ್ರಾಮವಾಗಿದ್ದು. ಎಲ್ಲ ಧರ್ಮ, ಜಾತಿಯವರೂ ಒಂದಾಗಿ ಬಾಳುತ್ತಿದ್ದೇವೆ. ಕೆಲ ವರ್ಷಗಳ ಹಿಂದೆ ಗ್ರಾಮದ ಕ್ರಾಸ್‌ನಲ್ಲಿ ಸರ್ಕಾರ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ತೆರೆದಿದೆ. ಇದರಿಂದ ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನ ಒಂದಿಲ್ಲೊಂದು ಕಡೆ ಜಗಳ ನಡೆಯುತ್ತಿವೆ. ಕೌಟುಂಬಿಕ ಕಲಹಗಳು ಹೆಚ್ಚಾಗಿವೆ ಎಂದು ಅಳಲು ತೋಡಿಕೊಂಡರು. ಎಂಎಸ್‌ಐಎಲ್ ಮಾತ್ರವಲ್ಲದೇ ಗ್ರಾಮದೊಳಗಿನ ಕೆಲ ಅಂಗಡಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಚಿಕ್ಕ ಹುಡುಗರಿಗೂ ಸುಲಭವಾಗಿ ಸಿಗುವಂತಾಗಿದೆ. ಗ್ರಾಮದ ಹಲವು ಯುವಕರು ಕುಡಿತದ ದಾಸರಾಗಿದ್ದಾರೆ. ಯಾವುದೇ ಜಾತ್ರೆ, ಉತ್ಸವ ಅಥವಾ ಶವ ಸಂಸ್ಕಾರ ಇದ್ದಾಗಲೂ ಕುಡಿದು ಗಲಾಟೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಮೊದಲು ಚೆನ್ನಾಗಿದ್ದ ಗ್ರಾಮದಲ್ಲಿ ಮದ್ಯದಂಗಡಿ ಬಂದ ಬಳಿಕ ಶಾಂತಿ, ನೆಮ್ಮದಿ ಹಾಳಾಗಿದೆ. ಮಹಿಳೆಯರು ನೆಮ್ಮದಿಯಿಂದ ಓಡಾಡಲು ಆಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಚನ್ನವ್ವ ಖನಗಾವಿ, ಈರವ್ವ ಯಕ್ಕುಂಡಿ, ಗಂಗವ್ವ ಸೋಮನ್ನವರ, ನಾಗರಾಜ ದೇಸಾಯಿ, ಬಸವರಾಜ ತಿಗಡಿ, ಮುದಕಪ್ಪ ಮೇಟಿ ಇತರರಿದ್ದರು.