ತುರಮುರಿ ಕಸ ವಿಲೇವಾರಿ ಘಟಕ ತೆರವುಗೊಳಿಸಲು ಜು.1ರೊಳಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ನಾಗರಾಜ ಜಾಧವ, ಬಿ.ಕೆ.ಅಷ್ಟೇಕರ, ಸುಹಾಸ ಜಾಧವ, ಡಿ.ಎಂ.ಬೆಳಗಾಂವಕರ ಇತರರಿದ್ದರು. 
ಬೆಳಗಾವಿ

ತುರಮುರಿ ತ್ಯಾಜ್ಯ ವಿಲೇವಾರಿ ಘಟಕ ತೆರವುಗೊಳಿಸಲು ಒತ್ತಾಯ

ಬೆಳಗಾವಿ : ತುರಮುರಿ ಕಸ ವಿಲೇವಾರಿ ಘಟಕ ತೆರವುಗೊಳಿಸುವ ಕುರಿತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಹತ್ತು ಗ್ರಾಮಗಳವರು ಜು.1ರ ಗಡುವು ನೀಡಿದ್ದಾರೆ. ಶುಕ್ರವಾರ ಗ್ರಾಮಗಳ ಪ್ರಮುಖರು ಈ ಸಂಬಂಧದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದಲ್ಲಿ. ಜು.1ರ ನಂತರ ಇಲ್ಲಿ ಕಸ ತಂದು ಸುರಿಯುವುದನ್ನೇ ತಡೆಯುವ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಏಪ್ರಿಲ್ 10ರಂದು ಮನವಿ ಕೊಟ್ಟಾಗ, 60 ದಿನದೊಳಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಈ ಅವಧಿ ಮುಗಿದು ಹೋದರೂ ಯಾವುದೇ ಕ್ರಮವಾಗಿಲ್ಲ. ಈಗಾಗಲೇ ಶಾಲೆಗಳು ಆರಂಭಗೊಂಡಿದ್ದರಿಂದ ನಮ್ಮ ಮಕ್ಕಳು ಪುನಃ ಅದೇ ಸಮಸ್ಯೆ ಎದುರಿಸುತ್ತಿದ್ದಾರೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಆರೋಗ್ಯದ ಮೇಲೆ ಈ ಘಟಕದಿಂದ ದುಷ್ಪರಿಣಾಮ ಬೀರುತ್ತಿದ್ದು, ಇದರಿಂದ ಶಾಶ್ವತವಾಗಿ ಮುಕ್ತಿ ಕೊಡಿಸಿ ಎಂದು ಒತ್ತಾಯಿಸಿದರು.
ಈ ಕಸ ವಿಲೇವಾರಿ ಘಟದ ದುರ್ವಾಸನೆ ಗಾಳಿಯಲ್ಲಿ ಸೇರಿ ವಾತಾವರಣವೂ ಹದಗೆಟ್ಟಿದೆ. ಜಲಮೂಲಗಳು ಕಲುಷಿತವಾಗಿವೆ. ಅಕ್ಷರಷಃ ಈ ಘಟಕವು ಸುತ್ತಮುತ್ತಲಿನ ಗ್ರಾಮಸ್ಥರನ್ನು ನಿಧಾನ ಗತಿಯ ವಿಷವಾಗಿ ಆವರಿಸಿಕೊಳ್ಳುತ್ತಿದೆ. ಆರೋಗ್ಯ, ಗ್ರಾಮದ ಘನತೆಯೂ ಹಾಳಾಗಿ ಹೋಗುತ್ತಿದ್ದು, ಶೀಘ್ರವೇ ಈ ಘಟಕೆ ತೆರವುಗೊಳಿಸಬೇಕು. ಇಲ್ಲದೇ ಹೋದಲ್ಲಿ ಕಸ ತಂದು ಸುರಿಯುವುದನ್ನೇ ತಡೆಯುವ ಮೂಲಕ ಉಗ್ರ ಹೋರಾಟ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಾಗರಾಜ ಜಾಧವ, ಬಿ.ಕೆ.ಅಷ್ಟೇಕರ, ಸುಹಾಸ ಜಾಧವ, ಡಿ.ಎಂ.ಬೆಳಗಾಂವಕರ ಹಾಗೂ ತುರಮುರಿ, ಉಚಗಾವಿ, ಕೋನೆವಾಡಿ, ಬಾಚಿ, ಬಸುರ್ತೆ, ಕಲ್ಲೆಹೋಳ, ಸುಳಗಾ, ಗೋಜಗಾ, ಮನ್ನೂರ ಮತ್ತು ಹಿಂಡಗಲಾ ಗ್ರಾಮದ ಪ್ರತಿನಿಧಿಗಳಿದ್ದರು.