ಬೆಳಗಾವಿಯಲ್ಲಿ ಶುಕ್ರವಾರ ಚಚಡಿ ಗ್ರಾಮಸ್ಥರು ತಮ್ಮೂರಿನ ಮದ್ಯದಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.  
ಬೆಳಗಾವಿ

ಸಾರಾಯಿ ಮಾರಾಟ ಬಂದ್ ಮಾಡಲು ಆಗ್ರಹ

ಬೆಳಗಾವಿ: ತಮ್ಮೂರಿನ ಎಂಎಸ್‌ಐಎಲ್ ಮದ್ಯದ ಅಂಗಡಿ ಹಾಗೂ ಗ್ರಾಮದೊಳಗಿನ ಅಕ್ರಮ ಸಾರಾಯಿ ಮಾರಾಟ ಬಂದ್ ಮಾಡಬೇಕು ಎಂದು ಆಗ್ರಹಿಸಿ ಸವದತ್ತಿ ತಾಲೂಕಿನ ಚಚಡಿ ಗ್ರಾಮಸ್ಥರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೊದಲು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಡಿಸಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಬಕಾರಿ ಇಲಾಖೆ ಕಚೇರಿಗೂ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರು ತಮ್ಮೂರಿನ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ಕೂಡಲೇ ಮದ್ಯದಂಗಡಿ ಬಂದ್ ಮಾಡಿ ಎಂದು ಒತ್ತಾಯಿಸಿದರು.
ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಚಚಡಿ ಐತಿಹಾಸಿಕ ಗ್ರಾಮವಾಗಿದ್ದು. ಎಲ್ಲ ಧರ್ಮ, ಜಾತಿಯವರೂ ಒಂದಾಗಿ ಬಾಳುತ್ತಿದ್ದೇವೆ. ಕೆಲ ವರ್ಷಗಳ ಹಿಂದೆ ಗ್ರಾಮದ ಕ್ರಾಸ್‌ನಲ್ಲಿ ಸರ್ಕಾರದ ಎಂಎಸ್‌ಐಎಲ್ ಸಾರಾಯಿ ಮಾರಾಟ ಮಳಿಗೆ ತೆರೆದಿದೆ. ಇದರಿಂದ ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನ ಒಂದಿಲ್ಲೊಂದು ಕಡೆ ಜಗಳ ನಡೆಯುತ್ತಿವೆ. ಕೌಟುಂಬಿಕ ಕಲಹಗಳು ಹೆಚ್ಚಾಗಿವೆ ಎಂದು ಅಳಲು ತೋಡಿಕೊಂಡರು.
ಎಂಎಸ್‌ಐಎಲ್ ಮಾತ್ರವಲ್ಲದೇ ಗ್ರಾಮದೊಳಗೆ ಕೆಲ ಅಂಗಡಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಚಿಕ್ಕ ಹುಡುಗರಿಗೂ ಸಾರಾಯಿ ಸುಲಭವಾಗಿ ಸಿಗುವಂತೆ ಆಗಿದೆ. ಹಲವು ಯುವಕರು ಕುಡಿತದ ದಾಸರಾಗಿದ್ದಾರೆ. ಯಾವುದೇ ಜಾತ್ರೆ, ಉತ್ಸವ ಅಥವಾ ಯಾರದ್ದಾದರೂ ಶವ ಸಂಸ್ಕಾರ ಇದ್ದಾಗಲೂ ಕುಡಿದು ಗಲಾಟೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಮೊದಲು ಚೆನ್ನಾಗಿದ್ದ ಗ್ರಾಮದಲ್ಲಿ ಮದ್ಯದಂಗಡಿ ಬಂದ ಬಳಿಕ ಶಾಂತಿ, ನೆಮ್ಮದಿ ಹಾಳಾಗಿದೆ. ಮಹಿಳೆಯರು ನೆಮ್ಮದಿಯಿಂದ ಓಡಾಡಲು ಆಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಚನ್ನವ್ವ ಖನಗಾವಿ, ಈರವ್ವ ಯಕ್ಕುಂಡಿ, ಗಂಗವ್ವ ಸೋಮನ್ನವರ, ನಾಗರಾಜ ದೇಸಾಯಿ, ಬಸವರಾಜ ತಿಗಡಿ, ಮುದಕಪ್ಪ ಮೇಟಿ ಇತರರಿದ್ದರು.