ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿ ಭವನ ನಿರ್ಮಾನಕ್ಕೆ ಅನುಮತಿ ನೀಡದಂತೆ ಆಗ್ರಹಿಸಿ ಸೋಮವಾರ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ದಶರಥ ಬನೋಶಿ, ಸತೀಶ ಗುಡದವರ, ಭೂಪಾಲ ಅತ್ತು, ಅರ್ಜುನ ಕಾಂಬಳೆ, ರೂಪಾ ಬಾರಿಗಡ್ಡಿ ಇತರರಿದ್ದರು.
ಬೆಳಗಾವಿ: ಕರ್ನಾಟಕದ ನೆಲದಲ್ಲಿ ಗಡಿ ವಿವಾದಕ್ಕೆ ಪುಷ್ಟಿ ನೀಡುವ ದುರುದ್ದೇಶದಿಂದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿ ಭವನ ನಿರ್ಮಾಣಕ್ಕೆ ಮುಂದಾಗಿರುವ ಮಹಾ ಸರ್ಕಾರ ನಡೆ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆಯೇ ಆಕ್ರೋಶಗಳು ಭುಗಿಲೆದ್ದಿದ್ದು, ಕನ್ನಡಪರ ಸಂಘಟನೆಗಳಿಂದ ಜಿಲ್ಲೆಯಲ್ಲಿ ಹೋರಾಟಗಳು ಶುರುವಾಗಿವೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಕಾರ್ಯಕರ್ತರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿಯಲ್ಲಿ ಕಳೆದ ಐದು ದಶಕಗಳಿಂದ ನಾಡದ್ರೋಹಿ ಎಂಇಎಸ್ ನಾಯಕರು ಮಹಾರಾಷ್ಟ್ರ ಸರ್ಕಾರವನ್ನು ಬಳಸಿಕೊಂಡು, ನಾಡದ್ರೋಹಿ ಚಟುವಟಿಕೆ ಮಾಡುತ್ತಿದ್ದಾರೆ. ಈ ಹಿಂದೆ ಹುತಾತ್ಮ ಭವನದ ಹೆಸರಿನಲ್ಲಿ ಗಡಿ ವಿವಾದ ಹೊತ್ತಿಸಲು ಮುಂದಾಗಿದ್ದರು. ಅದಕ್ಕೆ ವಿರೋಧ ವ್ಯಕ್ತವಾದ ಕಾರಣ ಸುಮ್ಮನಿದ್ದ ನಾಡದ್ರೋಹಿಗಳು ಈಗ ಮಹಾರಾಷ್ಟ್ರ ಗಡಿ ಭವನದ ಹೆಸರಿನಲ್ಲಿ ಹೊಸ ಕುತಂತ್ರಕ್ಕೆ ಮುಂದಾಗುತ್ತಿದ್ದು, ಈ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಯಾವುದೇ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ ಮಾತನಾಡಿ, ಒಂದು ರಾಜ್ಯದ ಸರ್ಕಾರ, ತನ್ನ ಪ್ರಜೆಗಳಿಗಾಗಿ ಇನ್ನೊಂದು ರಾಜ್ಯದಲ್ಲಿ ಭವನ ನಿರ್ಮಿಸುವುದು ಸಾಮಾನ್ಯ. ಅದರಂತೆ ದೆಹಲಿ, ಗೋವಾ ಸೇರಿ ವಿವಿಧ ರಾಜ್ಯಗಳಲ್ಲಿ ಕರ್ನಾಟಕ ಭವನಗಳಿವೆ. ಈ ಯಾವ ಭವನದಲ್ಲೂ ಅಲ್ಲಿರುವ ಸರ್ಕಾರಗಳ ಮತ್ತು ರಾಜ್ಯದ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಆದರೆ, ಬೆಳಗಾವಿಯಲ್ಲಿ ಎಂಇಎಸ್‌ನಂತಹ ಸಂಘಟನೆ ಮೊದಲನಿಂದಲೂ ನಾಡದ್ರೋಹಿ ಚಟುವಟಿಕೆಗಳನ್ನೇ ಮಾಡುತ್ತ ಬಂದಿದೆ. ಹೀಗಾಗಿ ಬೇರೆ ಕಡೆ ಇರುವಂತಹ ಸ್ಥಿತಿ ಇಲ್ಲಿಲ್ಲ. ಇದನ್ನು ಮನಗಂಡು ಯಾವುದೇ ಕಾರಣಕ್ಕೂ ಈ ಭವನ ನಿರ್ಮಾನಕ್ಕೆ ನಮ್ಮ ಸರ್ಕಾರ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
ಸತೀಶ ಗುಡದವರ, ಭೂಪಾಲ ಅತ್ತು, ಜಯವಂತ ನಿಡಗಲಕರ, ಅರ್ಜುನ ಕಾಂಬಳೆ, ರೂಪಾ ಬಾರಿಗಡ್ಡಿ, ವಿನಾಯಕ ಭೋವಿ ಇತರರಿದ್ದರು.