ಸುದ್ದಿಗೋಷ್ಠಿಯಲ್ಲಿ ರೋಶಿನಿ ಗೌಡ, ಡಾ.ವೀಣಾ ಕೃಷ್ಣಮೂರ್ತಿ, ರೇಖಾ ಅಂಗಡಿ ಇತರರಿದ್ದರು. 
ಬೆಳಗಾವಿ

8ನೇ ವೇತನ ಆಯೋಗ ರಚನೆ ಆಗ್ರಹ

ಬೆಳಗಾವಿ:ಕೇಂದ್ರ ಮಾದರಿಯಲ್ಲಿಯೇ ರಾಜ್ಯ ಸರ್ಕಾರವು 8ನೇ ವೇತನ ಆಯೋಗ ರಚನೆ ಮಾಡಬೇಕು. ಜತೆಗೆ ಮಾತೃತ್ವ ರಜೆ ಒಂದು ವರ್ಷದವರೆಗೆ ವಿಸ್ತರಿಸಬೇಕು ಎಂದು ಅಖಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶಿನಿ ಗೌಡ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ಕೂಡಲೇ ನೌಕರರ ಬೇಡಿಕೆ ಈಡೇರಿಕೆಗಾಗಿ ಸರ್ಕಾರ ಕ್ರಮ ವಹಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಸರಕಾರಿ ಮಹಿಳೆಯರ ಯಶೋಭಿವೃದ್ಧಿಗಾಗಿ ರಾಜ್ಯದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಹಾಗೂ ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ.ಪ್ರತಿ ಜಿಲ್ಲೆಗಳಿಗೂ ತೆರಳಿ ಸಭೆಗಳನ್ನು ನಡೆಸಿ, ಸರಕಾರಿ ಮಹಿಳಾ ನೌಕರರನ್ನು ಸಂಘಟಿತರನ್ನಾಗಿ ಮಾಡಿ, ಜಾಗೃತಿಗೊಳಿಸಲಿದ್ದೇವೆ. ಕೊನೆಗೆ ಫೆ. 12ರಂದು ಚಾಮರಾಜನಗರದಲ್ಲಿ ನಮ್ಮ ಪ್ರವಾಸ ಹಾಗೂ ಸದಸ್ಯತ್ವ ಅಭಿಯಾನ ಸಮಾರೋಪಗೊಳಿಸಲಿದ್ದೇವೆ ಎಂದರು.
ನಮ್ಮ ಸಂಘಟನೆಯಲ್ಲಿ ಡಿ ದರ್ಜೆಯಿಂದ ಎ ದರ್ಜೆಗೂ ಮಹಿಳಾ ನೌಕರರು ಸದಸ್ಯತ್ವ ಪಡೆದಿದ್ದಾರೆ. ಸರ್ಕಾರಿ ಮಹಿಳಾ ನೌಕರರ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕಾರ್ಯಕ್ಷೇತ್ರದಲ್ಲಿ ಆಗುವ ಸಮಸ್ಯೆಗಳ ನಿವಾರಣೆ ಸೇರಿದಂತೆ ಮಹಿಳೆಯರ ಸರ್ವಾಂಗೀಣ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಸಂಘಟನೆ ಶ್ರಮಿಸುತ್ತಿದೆ ಎಂದರು.
ರಾಜ್ಯ ಖಜಾಂಚಿ ಡಾ. ವೀಣಾ ಕೃಷ್ಣಮೂರ್ತಿ, ಬೆಳಗಾವಿ ಜಿಲ್ಲಾಧ್ಯಕ್ಷೆ ರೇಖಾ ಅಂಗಡಿ, ಕಾರ್ಯದರ್ಶಿ ಎಂ. ಆಷಾರಾಣಿ, ಜಯಶ್ರೀ ಪಾಟೀಲ ಇತರರಿದ್ದರು.