ಬೆಳಗಾವಿಯಲ್ಲಿ ಭಾನುವಾರ ತುರಮರಿ ಕಸ ವಿಲೇವಾರಿ ಘಟಕ ತೆರವಿಗೆ ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ: ತುರಮರಿ ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ಹಳ್ಳಿ ಜನರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದ್ದು, ಪಾಲಿಕೆ ವ್ಯಾಪ್ತಿಯ ಕಸ ಪಾಲಿಕೆ ವ್ಯಾಪ್ತಿಯಲ್ಲೇ ವಿಲೇವಾರಿಯಾಗಲಿ, ನಗರದ ಕಸ ಗ್ರಾಮೀಣ ಕ್ಷೇತ್ರಕ್ಕೆ ಯಾಕೆ? ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.
ತುರಮರಿ ಕಸ ವಿಲೇವಾರಿ ಘಟಕ ತೆರವಿಗೆ ಆಗ್ರಹಿಸಿ ಭಾನುವಾರ ಹಿಂಡಲಗಾ ಕಲ್ಮೇಶ್ವರ ಮಂದಿರದಿಂದ ತಮ್ಮ ಗೃಹ ಕಚೇರಿವರೆಗೆ ಮೋರ್ಚಾದಲ್ಲಿ ಆಗಮಿಸಿದ ತುರಮರಿ, ಉಚಗಾವಿ, ಕೊನೆವಾಡಿ, ಕಲ್ಲೆಹೊಳ, ಬಸುರ್ತೆ, ಹಿಂಡಲಗಾ, ಸುಳಗಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಘಟಕದಿಂದ ಅಂತರಜಲ ಕಲುಷಿತಗೊಳ್ಳುತ್ತಿದೆ. ಜನರಿಗೆ ಕ್ಯಾನ್ಸರ್ ಸಹಿತ ಅನೇಕ ರೋಗ ಬಂದಿವೆ. ಇದಕ್ಕೆ ಪಾಲಿಕೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ಮೇಯರ್,ಉಪಮೇಯರ್, ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಶಾಸಕರು, ಸಂಸದ ಜಗದೀಶ ಶೆಟ್ಟರ ನಿವಾಸದ ಎದುರಿಗೆ ಕಸವಿಟ್ಟು ಪ್ರತಿಭಟನೆ ಮಾಡೋಣ, ನಾನೂ ಕೈಜೋಡಿಸುತ್ತೇನೆ. ನಾಲ್ಕು ಭಾಗಗಳಲ್ಲಿ ಕಸ ಘಟಕ ಮಾಡುವ ಬಗ್ಗೆ ಪ್ರಸ್ತಾಪ ಇಟ್ಟಿದ್ದೇವೆ. ಏ.9ರ ನಂತರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಬಳಿಕ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶರಿಗೆ ವಿಡಿಯೋ ಕಾಲ್ ಮಾಡಿ, ಸೇರಿದ್ದ ಜನರನ್ನು ತೋರಿಸಿ, ತಾವು ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಕೇಳಿಕೊಂಡರು.
ಚಂದ್ರಕಾಂತ ಜಾಧವ, ಪುಂಡಲಿಕ ಖಾಂಡೇಕರ, ನಾಗರಾಜ ಜಾಧವ, ಸೋಮನಾಥ ಬೆಳಗಾಂವಕರ, ಪುಂಡಲಿಕ ಬೆಳಗಾಂವಕರ, ಸುನಿಲ ಬೆಳಗುಂದಕರ, ಕಾಡಾ ಅಧ್ಯಕ್ಷ ಯುವರಾಜ ಕದಂ, ಬಾಳು ಅಷ್ಟೇಕರ, ರವಿ ಕೋಕಿತಕರ, ಇತರರಿದ್ದರು.
ದಕ್ಷಿಣ ಶಾಸಕರೇ ಪಾಲಿಕೆ ಹೆಡ್
ಇದಕ್ಕಾಗಿ ನಾಲ್ಕು ಕಡೆ ಜಾಗ ಗುರುತಿಸಲು ಮೊದಲೇ ಹೇಳಿದ್ದೇನೆ. ಪಾಲಿಕೆಯ ಮೇಯರ್ ತಮ್ಮದೇ ರಾಜ್ಯಭಾರ ಮಾಡುತ್ತಾರೆ. ಉಸ್ತುವಾರಿ ಸಚಿವ, ಡಿಸಿ ಭೇಟಿಯಾಗುವುದಿಲ್ಲ. ಸಿಎಂ ಬಂದಾಗಲೂ ಬರುವುದಿಲ್ಲ. ದಕ್ಷಿಣ ಶಾಸಕರೇ ಪಾಲಿಕೆ ಹೆಡ್ ಆಗಿದ್ದಾರೆ. ಅವರೇ ಈ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆಸಿದ್ದಾರೆ.