ಬೆಳಗಾವಿಯ ನ್ಯೂ ಗೂಡ್ಸ್ ಶೆಡ್ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ಶುಕ್ರವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಮನವಿ ಸಲ್ಲಿಸಿದರು. ವಿಕಾಸ ಕಲಘಟಗಿ, ಗಣೇಶ ದಡ್ಡಿಕರ, ವಿಶಾಲ ದೇಶಪಾಂಡೆ, ಸಂಕೇತ ಪೇಟ್ನೆಕರ ಇತರರಿದ್ದರು.  
ಬೆಳಗಾವಿ

ನ್ಯೂಗೂಡ್ಸ್ ಶೆಡ್ ರಸ್ತೆ ದುರಸ್ತಿಗೆ ಆಗ್ರಹ

ಬೆಳಗಾವಿ :

ಸಂಪೂರ್ಣವಾಗಿ ಹಾಳಾಗಿರುವ ಖಾನಾಪುರ ರಸ್ತೆಯ ಬಸವೇಶ್ವರ ರೈಲ್ವೆ ಮೇಲ್ಸೇತುವೆ ಬಳಿಯಿಂದ ಶಾಸ್ತ್ರೀನಗರದ ಕಡೆ ಹೋಗುವ ನ್ಯೂ ಗೂಡ್ಸ್ ಶೆಡ್ ರಸ್ತೆ (ರೈಲ್ವೆ ನಿಲ್ದಾಣ ಹಿಂಭಾಗ) ಶಾಶ್ವತವಾಗಿ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ರಸ್ತೆಯಲ್ಲಿ ಸಣ್ಣದಾಗಿದ್ದ ಗುಂಡಿಗಳು ಈಚೆಗೆ ಸುರಿದ ಮಳೆಯಿಂದಾಗಿ ಅಳವಾಗಿವೆ. ರಸ್ತೆಯುದ್ದಕ್ಕೂ ಒಂದರ ಪಕ್ಕ ಒಂದು ಗುಂಡಿ ಇದೆ. ಇದರಲ್ಲೇ ಮಳೆ ನೀರು ನಿಲ್ಲುತ್ತಿದ್ದು, ಓಡಾಡುವುದು ತೀರಾ ಕಷ್ಟವಾಗಿದೆ. ಹೀಗಾಗಿ ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದೇ ಭಾಗದಲ್ಲಿ ಶಾಲೆ, ಆಸ್ಪತ್ರೆಯಿದೆ. ರೈಲ್ವೆ ನಿಲ್ದಾಣದ ಹಿಂಭಾಗದ ಪ್ರವೇಶ ದ್ವಾರ, ಸಿನಿಮಾ ಮಂದಿರ, ಕಪಿಲೇಶ್ವರ ದೇವಸ್ಥಾನಕ್ಕೆ ಹೋಗುವುದಕ್ಕೂ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ಭಾಗದ ಜನವಸತಿಯಿಂದಲೂ ನಿತ್ಯ ಶಾಲಾ-ಕಾಲೇಜ್‌ಗಳಿಗೆ ಮಕ್ಕಳು ಓಡಾಡುತ್ತಿದ್ದು, ಅಪಘಾತದ ಅಪಾಯ ಎದುರಾಗಿದೆ. ರಸ್ತೆ ದುರಸ್ತಿಯಾಗದ ಮಳೆಯಿಲ್ಲದಾಗ ಧೂಳು, ಮಳೆ ಬಂದರೆ ಕೆಸರು ಸಮಸ್ಯೆ ಆಗುತ್ತಿದೆ ಎಂದು ಅಳಲು ತೋಡಿಕೊಂಡರು.
ಬಸವೇಶ್ವರ ರೈಲ್ವೆ ಮೇಲ್ಸೇತುವೆಯಿಂದ ಹರಿದುಬರುವ ಮಳೆ ನೀರು ನೇರವಾಗಿ ಇದೇ ರಸ್ತೆಗೆ ಸೇರುತ್ತಿದೆ. ಇದರಿಂದ ಗುಂಡಿಗಳು ಮತ್ತಷ್ಟು ಹೆಚ್ಚಾಗಿವೆ. ಈ ನೀರಾದರೂ ರಸ್ತೆ ಪಕ್ಕ ಹರಿದು ಹೋಗಲು ಚರಂಡಿ ನಿರ್ಮಿಸಬೇಕು ಈ ಸಮಸ್ಯೆ ಬಗ್ಗೆ ಈಗಾಗಲೇ ಜೂ.10 ಹಾಗೂ ಜು.3ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕೈಗೊಂಡಿಲ್ಲ. ಕಳೆದ ಎರಡು ಗಣೇಶೋತ್ಸವ ಸಂದರ್ಭದಲ್ಲೂ ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರೂ ಕಾಮಗಾರಿ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಕಾಸ ಕಲಘಟಗಿ, ಗಣೇಶ ದಡ್ಡಿಕರ, ವಿಶಾಲ ದೇಶಪಾಂಡೆ, ಸುಲ್ತಾನ ನದಾಫ್, ಸಂಕೇತ ಪೇಟ್ನೆಕರ, ಇತರರಿದ್ದರು.’