ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿಗೆ ಪ್ರೀತಿ ಕಾಮಕರ, ಹನಮಂತ ಕೊಂಗಾಲಿ ಮನವಿ ಸಲ್ಲಿಸಿದರು. ವಾಣಿ ಜೋಶಿ, ಆನಂದ ಚೌವ್ಹಾಣ, ಗಿರೀಶ ದೊಂಗಡಿ, ಬ್ರಹ್ಮಾನಂದ ಮಿರಜಕರ, ವೀಣಾ ವಿಜಾಪುರೆ ಇತರರಿದ್ದರು. 
ಬೆಳಗಾವಿ

ಎಸ್‌ಎಫ್‌ಸಿ ಅನುದಾನ ಬಿಡುಗಡೆ ಆಗ್ರಹ

ಮಂಜುನಾಥ ಕೋಳಿಗುಡ್ಡ
 ಬೆಳಗಾವಿ:ರಾಜ್ಯ ಹಣಕಾಸು ಆಯೋಗ ( ಎಸ್‌ಎಫ್‌ಸಿ) ಅಡಿಯಲ್ಲಿ ಪೂರ್ತಿ ಅನುದಾನ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶುಕ್ರವಾರ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್,ಉಪಮೇಯರ್  ಹನಮಂತ ಕೊಂಗಾಲಿ ನೇತೃತ್ವದಲ್ಲಿ ಸದಸ್ಯರ ನಿಯೋಗ  ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ವೇತನ ಪಾವತಿಸುವಲ್ಲಿ ಸರ್ಕಾರ  ಶೇ.20ರಷ್ಟು ಕಡಿತಗೊಳಿಸಿ ಪಾಲಿಕೆ ನಿಧಿಯಿಂದ ಭರಿಸುವುದರಿಂದ  ಆರ್ಥಿಕ ಹೊರೆಯಾಗುತ್ತಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಎಸ್‌ಎಫ್‌ಸಿ ಅನುದಾನ ಕಡಿತಗೊಳಿಸುತ್ತಿರುವುದು ಪಾಲಿಕೆಗೆ ಆರ್ಥಿಕ ಹೊರೆಯಾಗುತ್ತಿದ್ದು, ಅಭಿವೃದ್ಧಿ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಸರ್ಕಾರವು ಎಸ್‌ಎಫ್‌ಸಿ ಸಂಪೂರ್ಣ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ನಗರದ ನಾಗರಿಕರ ವಿವಿಧ ತೆರಿಗೆಗಳು ಸರ್ಕಾರವೇ ನೇರವಾಗಿ ಭರಿಸಿಕೊಳ್ಳುತ್ತಿದೆ,ಆದರೆ, ಇಲ್ಲಿಯವರೆಗೆ ಪಾಲಿಕೆಗೆ ವಿಶೇಷ ಸೌಲಭ್ಯ ನೀಡಿಲ್ಲ. ರಾಜ್ಯೋತ್ಸವ, ಬಸವ,ಅಂಬೇಡ್ಕರ್, ಶಿವ ಜಯಂತಿ, ರಂಜಾನ್ ಹೀಗೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಪಾಲಿಕೆಯಿಂದಲೇ ಅನುದಾನ ಭರಿಸಲಾಗುತ್ತಿದೆ. ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಸರ್ಕಾರವು ಅನುದಾನ ಬಿಡುಗಡೆ ಮಾಡದೆ ಪಾಲಿಕೆ ನಿಧಿಯಿಂದಲೇ ಎಲ್ಲವನ್ನು ನಿರ್ವಹಿಸುವಂತೆ ಹೇಳುತ್ತಿದೆ. ಇದು ಪಾಲಿಕೆಗೆ ಹೊಡ್ಡ ಆರ್ಥಿಕ ಹೊಡೆತ ನೀಡುತ್ತಿದೆ ಎಂದು ಸದಸ್ಯರು ದೂರಿದರು.
ರಾಜ್ಯ ಸರ್ಕಾರವು ಕೂಡಲೇ ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಎಸ್‌ಎಫ್‌ಸಿ ಅಡಿಯಲ್ಲಿ ಯಾವುದೇ ರೀತಿಯ ಅನುದಾನ ಕಡಿತಗೊಳಿಸಬಾರದು.ಅಧಿಕಾರಿ, ಸಿಬ್ಬಂದಿಗೆ ವೇತನ ಸರ್ಕಾರವೇ ಪಾವತಿಸಬೇಕು. ಧಾರ್ಮಿಕ ಆಚರಣೆ, ಚಳಿಗಾಲ ಅಧಿವೇಶನದಲ್ಲಿ ನಗರದ ಸೌಂದರ್ಯಕರಣಕ್ಕಾಗಿ ಅನುದಾನವನ್ನು ಕೂಡ ಸರ್ಕಾರ ನೀಡಬೇಕು ಎಂದು ಮನವಿ ಮೂಲಕ ವಿನಂತಿಸಿದರು.
ವಾಣಿ ಜೋಶಿ, ಆನಂದ ಚೌವ್ಹಾಣ, ಗಿರೀಶ ದೊಂಗಡಿ, ಬ್ರಹ್ಮಾನಂದ ಮಿರಜಕರ, ವೀಣಾ ವಿಜಾಪುರೆ, ಸಂದೀಪ ಜೀರಗ್ಯಾಳ, ರಾಜಶೇಖರ ಡೋಣಿ, ಸಾರಿಕಾ ಪಾಟೀಲ ಇತರರಿದ್ದರು.