ಹುಕ್ಕೇರಿ ಸಮಗ್ರ ನೀರಾವರಿಗೆ ಆಗ್ರಹಿಸಿ ರೈತರು ಮೆರವಣಿಗೆ ನಡೆಸಿದರು. ಚೂನಪ್ಪ ಪೂಜೇರಿ, ಸಂಜು ಹಾವಣ್ಣವರ, ಸತ್ಯಪ್ಪ ಮಲ್ಲಾಪುರೆ, ಪ್ರೇಮ ಚೌಗಲಾ, ರಾಜು ಪವಾರ ಇತರರಿದ್ದರು.
- ರಾಜು ಪವಾರ ಆಕ್ರೋಶ
- ಹುಕ್ಕೇರಿಯಲ್ಲಿ ಮುಂದುವರಿದ ರೈತ ಪ್ರತಿಭಟನೆ
ಹುಕ್ಕೇರಿ: ನರ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ರೈತ ಸಂಘ ನಿಪ್ಪಾಣಿ ಘಟಕದ ಅಧ್ಯಕ್ಷ ರಾಜು ಪವಾರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ರೈತ ಸಂಘಟನೆ ಹಮ್ಮಿಕೊಂಡಿದ್ದ ಹುಕ್ಕೇರಿ ತಾಲೂಕು ಸಮಗ್ರ ನೀರಾವರಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳನ್ನು ತಕ್ಷಣ ಜಾರಿಗೊಳಿಸಬೇಕು. ಹುಕ್ಕೇರಿ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲೇಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ರೈತ ಉಪವಾಸ ಕುಳಿತುಕೊಳ್ಳಬಾರದೆಂದು ನಿಡಸೋಸಿ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮತ್ತು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸೇರಿದಂತೆ ತಾಲೂಕಿನ ವಿವಿಧ ಮಠಗಳ ಮಠಾಧೀಶರು ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರಿಗೆ ಊಟದ ವ್ಯವಸ್ಥೆ ಮಾಡಿದ್ದು ಶ್ಲಾಘನೀಯ ಎಂದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಿಪ್ಪುರು ಗ್ರಾಮದ ಮಹಿಳೆಯರು ಮಾತನಾಡಿ, ಮಹಾರಾಷ್ಟ್ರ ಗಡಿಭಾಗದ ಗ್ರಾಮಗಳಲ್ಲಿ ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲ. ಹಣ ಕೊಟ್ಟು ಟ್ಯಾಂಕರ್ ನೀರು ಕೊಂಡುಕೊಳ್ಳುವ ಪರಿಸ್ಥಿತಿ ಬಂದಿದೆ. ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳು ಎಚ್ಚರಿಕೆ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ವಕೀಲ ಭೀಮಸೇನ ಬಾಗಿ, ಮುಸ್ಲಿಂ ಸಮುದಾಯದ ತಾಲೂಕು ಅಧ್ಯಕ್ಷ ಸಲಿಂ ನದಾಫ್, ನಿಸಾರ್ ನದಾಫ್, ವಿವಿಧ ಸಂಘಟನೆಗಳ ಮುಖಂಡರು, ವ್ಯಾಪಾರಸ್ಥರು ಇದ್ದರು.
ಹೋರಾಟಕ್ಕೆ ಬಂದ್ ಬೆಂಬಲ
ತಾಲೂಕು ಸಮಗ್ರ ನೀರಾವರಿ ಜಾರಿಗೆ ಆಗ್ರಹಿಸಿ ರೈತರು ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಚಿವರ ವಿರುದ್ಧ ಘೋಷಣೆ ಕೂಗುತ್ತಾ ಕಾಲ್ನಡಿಗೆ ಮೂಲಕ ಮೆರವಣಿಗೆ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕರೆ ನೀಡಿದ ಹಿನ್ನೆಲೆಯಲ್ಲಿ ವರ್ತಕರು ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಸಂಪೂರ್ಣ ಬಂದ್ ಮಾಡುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಹುಕ್ಕೇರಿ ತಾಲೂಕು ಸಮಗ್ರ ನೀರಾವರಿಗಾಗಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಬೆಂಬಲಿಸಿ ರೈತರು ಸಂಕೇಶ್ವರ ಮತ್ತು ಯಮಕನಮರಡಿಯಲ್ಲೂ ಮೇ ೨೩ರಂದು ಪ್ರತಿಭಟನೆಗೆ ಕೈಗೊಳ್ಳಲು ನಿರ್ಧರಿಸಿದ್ದಾರೆ.
"
ರೈತ ಸಂಘಟನೆ ಹಾಗೂ ವಿವಿಧ ಅಭಿವೃದ್ಧಿಪರ ಸಂಘಟನೆಗಳು ಕೈಜೋಡಿಸಿದರೆ ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕತ್ತಿ ಕುಟುಂಬ ಸಿದ್ಧ. ಉತ್ತರ ಕರ್ನಾಟಕದ ಶೇ.೬೦ ಪ್ರದೇಶ ನೀರಾವರಿ ಯೋಜನೆಗಳಿಂದ ವಂಚಿತವಾಗಿರುವುದರಿಂದ ಈ ಹೋರಾಟ ಇಲ್ಲಿಗೆ ಸೀಮಿತವಾಗಬಾರದು.
— ರಮೇಶ ಕತ್ತಿ ಮಾಜಿ ಸಂಸದ