ಬಸವರಾಜ ಕಪ್ಪಣ್ಣವರ, ಬಾಬು ಇನಾಮತಿ, ಐ.ಎಸ್.ಪಾಟೀಲ, ನೀಲಪ್ಪ ಅಣ್ಣಿಗೇರಿ ಸೇರಿದಂತೆ ಸವದತ್ತಿ ಹಾಗೂ ಬಾಗಲಕೋಟೆ ಭಾಗದ ಬೀಜೋತ್ಪಾದನಾ ರೈತರು ಇದ್ದರು. ಬೆಳಗಾವಿ ಜಿಲ್ಲೆ ರೈತರು ಬೆಂಗಳೂರಿನಲ್ಲಿ ರಾಜ್ಯ ಬೀಜ ನಿಗಮದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಬಸವರಾಜ ಕಪ್ಪಣ್ಣವರ, ಬಾಬು ಇನಾಮತಿ, ನೀಲಪ್ಪ ಅಣ್ಣಿಗೇರಿ ಹಾಗೂ ರೈತರು ಇತರರಿದ್ದರು.
ಸವದತ್ತಿ: ರಾಜ್ಯ ಬೀಜ ನಿಗಮ ಬೀಜೋತ್ಪಾದನಾ ಬೆಳೆಗಳಿಗೆ ನಿಗದಿಪಡಿಸಿರುವ ಖರೀದಿ ದರವನ್ನು ತಕ್ಷಣ ಪರಿಷ್ಕರಿಸಿ ಹೆಚ್ಚಿಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಬೀಜೋತ್ಪಾದನಾ ರೈತರು ಬೆಂಗಳೂರಿನಲ್ಲಿ ಶನಿವಾರ ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ರೈತರ ಪರವಾಗಿ ಬಸವರಾಜ ಕಪ್ಪಣ್ಣವರ ಮಾತನಾಡಿ, 2025-26ನೇ ಸಾಲಿನ ಹಿಂಗಾರು ಹಂಗಾಮಿನ ಬಿಜೆಡಿ ಕಡಲೆಗೆ ಪ್ರತಿ ಕ್ವಿಂಟಾಲ್‌ಗೆ 6,600 ರೂ. ಹಾಗೂ ಜಾಕಿ ಮತ್ತು ಬಿಜಿ-11 ತಳಿಯ ಕಡಲೆಗೆ 4,900 ರೂ. ದರ ನಿಗದಿಪಡಿಸಲಾಗಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಲೆ ಬೆಲೆ 6,600 ರೂ. ರಿಂದ 7,000 ರೂ.ವರೆಗೆ ಇದ್ದು, ನಿಗಮದ ದರದಿಂದ ರೈತರಿಗೆ ನಷ್ಟವಾಗುತ್ತಿದೆ. ಆದ್ದರಿಂದ ಕಡಲೆ ಖರೀದಿ ದರವನ್ನು ಪರಿಷ್ಕರಿಸಿ ಪ್ರತಿ ಕ್ವಿಂಟಾಲ್‌ಗೆ 7,650 ರೂ. ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಬೀಜೋತ್ಪಾದನಾ ಜೋಳಕ್ಕೆ ನಿಗದಿಪಡಿಸಿರುವ 4,400 ರೂ. ದರ ಮಾರುಕಟ್ಟೆ ದರಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ ಜೋಳವು 5,500 ರೂ. ಮಾರಾಟವಾಗುತ್ತಿದ್ದು, ರೈತರಿಗೆ ಸಮರ್ಪಕ ಲಾಭ ದೊರೆಯುತ್ತಿಲ್ಲ. ಹೀಗಾಗಿ, ಜೋಳದ ಖರೀದಿ ದರವನ್ನು ಪ್ರತಿ ಕ್ವಿಂಟಾಲ್‌ಗೆ 6,500 ರೂ.ಗೆ ಹೆಚ್ಚಿಸಬೇಕು. ರೈತರ ಹಿತದೃಷ್ಟಿಯಿಂದ ಬೀಜ ನಿಗಮ ಕೂಡಲೇ ದರ ಪರಿಷ್ಕರಣೆ ಮಾಡಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಬೇಡಿಕೆಗಳನ್ನು ಸರ್ಕಾರ ಹಾಗೂ ಬೀಜ ನಿಗಮ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ರಾಜ್ಯದ ರೈತರಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ರೈತರು ಎಚ್ಚರಿಸಿದ್ದಾರೆ.