ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದತ್ತಾಜಿ ನಲವಡೆ ಮಾತನಾಡಿದರು. ನಾನಾಜಿ ನಿವಂಗುಣೆ, ಸುನೀಲಸ್ವಾಮಿ, ಹನುಮಂತ ದಿಗೆ, ರೋಹಿತ ನಲವಡೆ ಇದ್ದಾರೆ.
ಬೆಳಗಾವಿ : ದಾವಣಗೆರೆ ಜಿಲ್ಲೆಯ ಹೊದಿಗೇರಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿರಾಜೆ ಭೋಸಲೆ ಸ್ಮಾರಕ ಸ್ಥಳವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಸ್ಮಾರಕದ ರೀತಿಯಲ್ಲಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ರಾಷ್ಟ್ರವ್ಯಾಪಿ ಸಾರ್ವಜನಿಕ ಆಂದೋಲನ ಆರಂಭಿಸಲಾಗುವುದು ಎಂದು ಪುಣೆಯ ಮಾವಳಾ ಜವಾನ ಸಂಸ್ಥೆ ಅಧ್ಯಕ್ಷ ದತ್ತಾಜಿ ನಲವಡೆ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಜಿರಾಜೆ ಭಕ್ತರು ಮತ್ತು ಅಭಿಮಾನಿಗಳು, ಇತಿಹಾಸಕಾರರು, ಮಾವಳಾ ಜವಾನ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಮಂಗಳವಾರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ನೋಡಿದ್ದೇವೆ. ಅಲ್ಲಿನ ಪರಿಸ್ಥಿತಿ ನೋಡಿದಾಗ, ಇದನ್ನು ಅಭಿವೃದ್ಧಿಪಡಿಸುವ ಅಗತ್ಯತೆ ತುಂಬಾ ಇರುವುದು ಕಂಡು ಬಂದಿದೆ. ಸಮಾಧಿ ಮೇಲ್ಭಾಗದಲ್ಲಿ ತುರ್ತಾಗಿ ಮೇಲ್ಛಾವಣಿ(ಛತ್ರ)ಯನ್ನು ಕರ್ನಾಟಕ ಸರ್ಕಾರ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರಾೃನಂತರ ಈ ಸಮಾಧಿ ಸ್ಥಳವನ್ನು ಸರ್ಕಾರ ಸಂರಕ್ಷಿತ ಸ್ಮಾರಕವನ್ನಾಗಿ ಘೋಷಿಸಿದೆ. ಆದರೆ ಈವರೆಗೆ ಸಮಾಧಿಗೆ ಛತ್ರ ನಿರ್ಮಿಸುವ ಕಾರ್ಯ ಯಾರೂ ಮಾಡಿಲ್ಲ. ರಾಜಕೀಯ ಇಚ್ಛಾಸಕ್ತಿಯ ಕೊರತೆಯಿಂದ ಪವಿತ್ರವಾದ ಈ ಸಮಾಧಿಯೂ ಮಳೆ, ಬಿಸಿಲಿನಲ್ಲಿ ಹಾಗೆಯೇ ಇದೆ. ಈ ಸ್ಥಳವು ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಇವರ ಅನುಮತಿ ಇಲ್ಲದೇ ಇಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಮಾಡದಂತಾಗಿದೆ. ಎಲ್ಲವನ್ನೂ ಸರ್ಕಾರವೇ ಮಾಡಬೇಕಾಗಿದ್ದು, ಇದೇ ರೀತಿಯ ನಿರ್ಲಕ್ಷೃ ಮುಂದುವರೆಸಿದಲ್ಲಿ ಜ.1ರಂದು ದೆಹಲಿಯ ದೆಹಲಿಯ ಜಂತರ ಮಂತರನಲ್ಲಿ ಜನ ಆಂದೋಲನ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.
ನಾನಾಜಿ ನಿವಂಗುಣೆ, ಸುನೀಲಸ್ವಾಮಿ, ಹನುಮಂತ ದಿಗೆ, ರೋಹಿತ ನಲವಡೆ ಇದ್ದರು.