ಗೋಕಾಕ ತಾಲೂಕಿನ ನಾಲ್ಕು ದೇವಸ್ಥಾಗಳ ಅಭಿವೃದ್ಧಿಗೆ ಆಗ್ರಹಿಸಿ ನವದೆಹಲಿಯಲ್ಲಿ ಸಂಸದ ಜಗದೀಶ ಶೆಟ್ಟರ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶಿಖಾವತ್‌ಗೆ ಮನವಿ ಸಲ್ಲಿಸಿದರು.
ಬೆಳಗಾವಿ: ಗೋಕಾಕದ ನಾಲ್ಕು ದೇವಸ್ಥಾನಗಳನ್ನು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶಿಖಾವತ್‌ಗೆ ಸಂಸದ ಜಗದೀಶ ಶೆಟ್ಟರ ಮನವಿ ಸಲ್ಲಿಸಿದ್ದಾರೆ.
ನವದೆಹಲಿಯ ಸಚಿವರ ಗೃಹ ಕಚೇರಿಯಲ್ಲಿ ಮಂಗಳವಾರ ಭೇಟಿ ಮಾಡಿದ ಶೆಟ್ಟರ ಅವರು, ಕುಲಗೋಡದ ಬಲಭೀಮ, ಘಾಟಗಿ ಬಸವೇಶ್ವರ, ಮಸಗುಪ್ಪಿಯ ಮಹಾಲಕ್ಷ್ಮೀ, ಸುಣಧೋಳಿಯ ಜಡಿಸಿದ್ಧೇಶ್ವರ ದೇವಸ್ಥಾನಗಳಿಗೆ ಸಾಕಷ್ಟು ಭಕ್ತರು ಆಗಮಿಸುತ್ತಾರೆ. ಆದರೆ ಮೂಲ ಸೌಕರ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದು, ಪ್ರಸಾದ ಯೋಜನೆಯಡಿ ಅಭಿವೃದ್ಧಿಪಡಿಸಲು ಆಗ್ರಹಿಸಿದರು.
ಸವದತ್ತಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನವು ಕೇಂದ್ರದ 118 ಕೋಟಿ ರೂ. ಮತ್ತು ರಾಜ್ಯ ಸರ್ಕಾರದ 96 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದಿರುವುದಕ್ಕೆ ಸಚಿವರಿಗೆ ಅಭಿನಂದನೆ ಸಲ್ಲಿಸಿ, ರಾಮದುರ್ಗ ತಾಲೂಕಿನ ಶ್ರೀಕ್ಷೇತ್ರ ಶಬರಿಕೊಳ್ಳದ ಅಭಿವೃದ್ಧಿ ಪಡಿಸಲು ಕೇಳಿಕೊಂಡಿದ್ದಾರೆ.
ಮನವಿ ಅವಲೋಕಿಸಿದ ಸಚಿವ ಶಿಖಾವತ್, ಉಪಯುಕ್ತ ನಿರ್ಣಯ ಕೈಗೊಳ್ಳುವ ಭರವಸೆ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.