ಮಹಾನಗರ ಪಾಲಿಕೆ 
ಬೆಳಗಾವಿ

ಕನ್ನಡ ಪರ ನಿರ್ಣಯಕ್ಕೆ ಒತ್ತಾಯ

ಬೆಳಗಾವಿ: ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ, ಮಹಾಜನ ವರದಿಯೇ ಅಂತಿಮ ಎಂಬ ಐತಿಹಾಸಿಕ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಇಲ್ಲಿನ ಮಹಾನಗರ ಪಾಲಿಕೆ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರ ನಡೆಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವ ಹಿನ್ನೆಲೆಯಲ್ಲಿ ಗಡಿಭಾಗದ ಪ್ರದೇಶಗಳು ಕರ್ನಾಟಕದ್ದು ಎಂದು ಖಚಿತ ಪಡಿಸಲು ಪ್ರಬಲ ಸಾಕ್ಷಿ ಸಲ್ಲಿಕೆ ಮಾಡುವ ಉದ್ದೇಶದಿಂದ ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ಪರ ನಿಲುವು ತೆಗೆದುಕೊಳ್ಳುವಂತೆ ಕನ್ನಡ ಪರ ಸಂಘಟನೆಗಳು, ಹೋರಾಟಗಾರರು ಆಗ್ರಹಿಸಿದ್ದಾರೆ. ಆದರೆ, ಮರಾಠಿ ಭಾಷಿಕರ ವೋಟ್ ಬ್ಯಾಂಕ್ ಎಂಬ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ನಿರ್ಣಯ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
2005 ಅಕ್ಟೋಬರ್ 10ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಪಾಲಿಕೆ ಮೇಯರ್, ಉಪಮೇಯರ್ ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಬಹುಮತ ನಿರ್ಣಯ ಕೈಗೊಂಡು ಮಹಾರಾಷ್ಟ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು.
ಇದು ಕರ್ನಾಟಕ ಸರ್ಕಾರದ ಕಾನೂನು ಹೋರಾಟಕ್ಕೆ ಅಡ್ಡಿಯಾಗಿದೆ. ಇದಕ್ಕೆ ಪ್ರತಿಯಾಗಿ ಪಾಲಿಕೆ ಆಡಳಿತ ಮಂಡಳಿ ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ, ಮಹಾಜನ ವರದಿಯೇ ಅಂತಿಮ ಎಂಬ ನಿರ್ಣಯ ಕೈಗೊಳ್ಳುವುದು ಅವಶ್ಯವಾಗಿದೆ ಎಂದು ಒತ್ತಾಯಿಸಿದರು.
ಪಾಲಿಕೆಯ 58ರ ಪೈಕಿ 55 ಸದ್ಯಸರು ಕನ್ನಡಿಗರೇ ಇದ್ದಾರೆ. ಅಲ್ಲದೆ, ಮೇಯರ್, ಉಪಮೇಯರ್ ಕನ್ನಡ ಭಾಷಿಕರಾಗಿದ್ದು, ಕನ್ನಡ ಪರ ನಿರ್ಣಯ ಕೈಗೊಂಡು ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ಗೆ ಕಳುಹಿಸಬೇಕು. ಇದರಲ್ಲಿ ವಿಳಂಬ ಮಾಡಬಾರದು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಅಶೋಕ ಚಂದರಗಿ, ಮಹಾದೇವ ತಳವಾರ, ಶ್ರೀನಿವಾಸ ತಾಳೂರಕರ್ ಒತ್ತಾಯಿಸಿದ್ದಾರೆ.
ಪಾಲಿಕೆಗೆ ಬೀಗ ಜಡಿಯಲು ನಿರ್ಧಾರ: ಮೇ 13ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕನ್ನಡ ಪರ ನಿರ್ಣಯ ಕೈಗೊಳ್ಳುವುದಾಗಿ ಸದಸ್ಯರು ಭರವಸೆ ನೀಡಿದ್ದಾರೆ. ಒಂದು ವೇಳೆ ನಿರ್ಣಯ ಕೈಗೊಳ್ಳದಿದ್ದರೆ ಪಾಲಿಕೆಗೆ ಬೀಗ ಜಡಿದು ಧರಣಿ ನಡೆಸಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ.