ಖಾತೆ ಮಾಡಿಕೊಡುವ ಇ-ಪೌತಿ ಖಾತೆ
ಬೆಳಗಾವಿ :ಹಲವು ವರ್ಷಗಳಿಂದ ಮೃತರ ಹೆಸರಿನಲ್ಲಿರುವ ಜಮೀನುಗಳನ್ನು ಅರ್ಹ ವಾಸರುದಾರರಿಗೆ ನಿಗದಿತ ಅವಧಿಯಲ್ಲಿಯೇ ಖಾತೆ ಮಾಡಿಕೊಡುವ ಇ-ಪೌತಿ ಖಾತೆ ವಿಳಂಬಕ್ಕೆ ರೈತರು ತತ್ತರ!
ಹೌದು.ಜಿಲ್ಲೆಯಲ್ಲಿ ಮೃತ ರೈತರ ಹೆಸರಿನಲ್ಲೇ ಲಕ್ಷಾಂತರ ಎಕರೆ ಜಮೀನುಗಳು ಇನ್ನೂ ದಾಖಲೆಗಳಿದ್ದರಿಂದ ವಾರಸುದಾರರು ಜಮೀನಿನ ಹಕ್ಕು, ಬ್ಯಾಂಕ್ ಸಾಲ, ಬೆಳೆ ವಿಮೆ, ಸರ್ಕಾರಿ ಸೌಲಭ್ಯ ಸೇರಿ ಅನೇಕ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕಂದಾಯ ಇಲಾಖೆ ಇ-ಪೌತಿ ಖಾತೆ ಆಂದೋಲನ ಆರಂಭಿಸಿದೆ. ಆದರೆ, ಗ್ರಾಮ ಲೆಕ್ಕಾಧಿಕಾರಿ, ತಾಲೂಕು ತಹಸೀಲ್ದಾರ, ಸಿಬ್ಬಂದಿ ವಿಳಂಬದಿಂದಾಗಿ ಜಿಲ್ಲೆಯಲ್ಲಿ ವಾರ್ಷಿಕ ಗುರಿ ನೀಡಿರುವ 4.40 ಲಕ್ಷ ಅಧಿಕ ಪೌತಿ ಖಾತೆಗಳ ಪೈಕಿ 2.59 ಲಕ್ಷ ಪೌತಿ ಖಾತೆ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ.
ಸರ್ಕಾರದ ನಿಯಮದ ಪ್ರಕಾರ ಮೃತರ ಮರಣ ಪ್ರಮಾಣಪತ್ರ, ವಂಶವೃಕ್ಷ ಮತ್ತು ಪ್ರಸ್ತುತ ಆರ್‌ಟಿಸಿ ದಾಖಲೆಗಳೊಂದಿಗೆ ವಾರಸುದಾರರು ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಏಳು ದಿನಗಳೊಳಗೆ ಪೌತಿ ಖಾತೆ ಮಾಡಿಕೊಡಬೇಕು. ಆದರೆ ವಾಸ್ತವದಲ್ಲಿ ರೈತರು ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಗತ್ಯ ದಾಖಲೆಗಳ ಬೇಡಿಕೆ, ಕಡತಗಳನ್ನು ವಿಳಂಬಗೊಳಿಸುವ ಪ್ರವೃತ್ತಿಯೇ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ.
ಜಮೀನಿನ ಕುರಿತು ನ್ಯಾಯಾಲಯ, ಜಿಲ್ಲಾ, ಎಸಿ ಕೋರ್ಟ್‌ಗಳಲ್ಲಿ ಭೂ ವಿವಾದವಿದ್ದರೆ ನಿಯಮಾನುಸಾರ ಜಂಟಿ ಖಾತೆ ಮಾಡಬೇಕು. ಬಳಿಕ ನಮೂನೆ-12 ಹಾಗೂ ನಮೂನೆ-21 ಪ್ರಕಟಿಸಿ 15 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಆಕ್ಷೇಪಣೆ ಬಂದರೆ ತಹಸೀಲ್ದಾರ ಒಂದು ತಿಂಗಳೊಳಗೆ ಪ್ರಕರಣ ಇತ್ಯರ್ಥಪಡಿಸಬೇಕು. ಆದರೆ ಈ ಪ್ರಕ್ರಿಯೆಗಳೂ ಸರಿಯಾಗಿ ಅನುಸರಿಸಲಾಗುತ್ತಿಲ್ಲ.ಪೌತಿ ಖಾತೆ ಪೂರ್ಣಗೊಳ್ಳದಿದ್ದರೆ ವಾರಸುದಾರರಿಗೆ ಜಮೀನಿನ ಹಕ್ಕು ವರ್ಗಾವಣೆ ಆಗುವುದಿಲ್ಲ. ಬೆಳೆ ಸಾಲ, ಬೆಳೆ ವಿಮೆ, ಪರಿಹಾರ, ಜಮೀನು ಮಾರಾಟ ಅಥವಾ ನೋಂದಣಿ ಸೇರಿದಂತೆ ಹಲವು ಕಾನೂನು ಪ್ರಕ್ರಿಯೆಗಳು ಸ್ಥಗೀತಗಗೊಳ್ಳುತ್ತಿವೆ.
ಗ್ರಾಮ ಲೆಕ್ಕಾಧಿಕಾರಿಗಳು ಇ-ಪೌತಿಗೆ ಖಾತೆಗೆ ಅರ್ಜಿ ಸಲ್ಲಿಸುವವರಿಂದ ಇ-ಕೆವೈಸಿ, ವಂಶವೃಕ್ಷ, ಮರಣ ಪ್ರಮಾಣಪತ್ರ ಸೇರಿ ಅಗತ್ಯ ದಾಖಲೆ ಪಡೆದುಕೊಳ್ಳಬೇಕು. ಒಂದು ವೇಳೆ ಮರಣ ಪ್ರಮಾಣಪತ್ರ ಲಭ್ಯವಿಲ್ಲದಿದ್ದರೆ ಆಧಾರ, ಪಡಿತರ ಚೀಟಿ ಹಾಗೂ ಅಫಿಡವಿಟ ಆಧರಿಸಿ ಮಹಜರು ನಡೆಸಿ ಅರ್ಜಿ ದಾಖಲಿಸುವ ಅವಕಾಶವಿದೆ. ಆದರೆ, ದಾಖಲೆಗಳ ನೆಪದಲ್ಲಿ ಅಲೆದಾಡಿಸುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.
...............................
ಜಿಲ್ಲೆಯ ಬಹುತೇಕ ಪ್ರಕರಣಗಳಲ್ಲಿ ಜಮೀನುಗಳು 30 ವರ್ಷದಿಂದ ಮೃತ ಹೆಸರಿನಲ್ಲಿವೆ. ಕೌಟುಂಬಿಕ ಕಲಹ, ಮೃತ ಹೆಸರಿನಲ್ಲಿರುವ ದಾಖಲೆಗಳು ಸಿಗದಿರುವುದು, ಕುಟುಂಬದಲ್ಲಿರುವವರ ಪೈಕಿ ಒಬ್ಬರುಇ-ಕೆವೈಸಿಗೆ ಒಪ್ಪಿದರೆ ಇನ್ನೂಬ್ಬರು ಒಪ್ಪುತ್ತಿಲ್ಲ. ಆಧಾರ್ ಜೋಡಣೆ ಆಗಿಲ್ಲ ಹೀಗೆ ವಿವಿಧ ಸಮಸ್ಯೆಗಳಿಂದ ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿ ಆಗುತ್ತಿಲ್ಲ ಎಂದು ತಾಲೂಕು ತಹಸೀಲ್ದಾರಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇ-ಪೌತಿ ಖಾತೆ ಪ್ರಗತಿ
ಪ್ರಕ್ರಿಯೆಗೊಳಿಸಬಹುದಾದ - 1,73,917
ಈಗಾಗಲೇ ಜಿಲ್ಲೆಯಲ್ಲಿ ಇ-ಪೌತಿ ಖಾತೆ ಅಭಿಯಾನಕ್ಕೆ ವೇಗಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, 2026 ಡಿಸೆಂಬರ್ ಒಳಗಾಗಿ 4.40 ಲಕ್ಷ ಇ-ಪೌತಿ ಖಾತೆ ಗುರಿ ತಲುಪಲಿದ್ದೇವೆ. ಯಾವುದೇ ರೈತರನ್ನು ಕಚೇರಿಗಳಿಗೆ ಅಲೆದಾಡಿಸದಂತೆ ತಹಸೀಲ್ದಾರ, ವಿಎಒಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ