ಹುಬ್ಬಳ್ಳಿಯಲ್ಲಿ ಗರ್ಭಿಣಿ ಕೊಂದಿರುವ ಹಂತಕರಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಬೆಳಗಾವಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಚಂದ್ರಕಾಂತ ಮಾದರ, ಮಿಲಿಂದ ಐಹೊಳೆ, ಬಾಳವ್ವ ಹರಿಜನ, ಸುನೀತಾ ಮೂದಗಿ ಇದ್ದಾರೆ. 
ಬೆಳಗಾವಿ

ಗರ್ಭಿಣಿ ಕೊಂದವರಿಗೆ ಮರಣ ದಂಡನೆ ವಿಧಿಸಿ

ಬೆಳಗಾವಿ: ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಪ್ರೀತಿಸಿ ಮದುವೆಯಾದ ಕಾರಣಕ್ಕೆ ಗರ್ಭಿಣಿಯನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರಗೆ ಪ್ರತಿಭಟನಾ ರ‌್ಯಾಲಿಯಲ್ಲಿ ಬಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗರ್ಭಿಣಿ ಎಂದೂ ನೋಡದೆ ಸ್ವಂತ ಮಗಳನ್ನೇ ತಂದೆ ಹಾಗೂ ಸಂಬಂಧಿಕರು ಹತ್ಯೆ ಮಾಡಿರುವುದು ಮಾನವಕುಲಕ್ಕೆ ಎಸಗಿದ ದ್ರೋಹ. ಸಂವಿಧಾನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಕಸಿದುಕೊಂಡವರಿಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಸೆಕ್ಷನ್ ದಾಖಲಿಸಿ, ಜಾಮೀನು ಸಿಗದಂತೆ ನೋಡಿಕೊಳ್ಳಬೇಕು. ಸಂತ್ರಸ್ತ ಕುಟುಂಬದ ಸದಸ್ಯರಿಗೆ ಪೊಲೀಸ್ ಭದ್ರತೆ ಒದಗಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಚಂದ್ರಕಾಂತ ಮಾದರ, ಮಿಲಿಂದ ಐಹೊಳೆ, ಬಸವರಾಜ ಕಟ್ಟೀಮನಿ, ಬಾಳವ್ವ ಹರಿಜನ, ಸುನೀತಾ ಮೂದಗಿ ಇತರರಿದ್ದರು.