ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆ ಆವರಣದಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿರುವ ತೆರೆದ ಬಾವಿ. 
ಬೆಳಗಾವಿ

ಅಂಗನವಾಡಿ ಪಕ್ಕದಲ್ಲಿ ಅಪಾಯಕಾರಿ ತೆರೆದ ಬಾವಿ!

ಡಿ.ವಿ.ಕಮ್ಮಾರ ಬೆಳಗಾವಿ
ಇಲ್ಲಿನ ಶಿವಾಜಿ ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಇಲಾಖೆ ಆವರಣದಲ್ಲಿ ಜನರ ದಾಹ ಇಂಗಿಸುವ ಉದ್ದೇಶಕ್ಕಾಗಿ ತೋಡಲಾಗಿದ್ದ ತೆರೆದ ಬಾವಿಯೊಂದು ಈಗ ಅಪಾಯಕ್ಕೆ ಆಹ್ವಾನಿಸುವ ಆತಂಕದ ಗುಂಡಿಯಾಗಿ ಪರಿಣಮಿಸಿದೆ.
ಪಾಳುಬಿದ್ದ ಕಟ್ಟಡಗಳಿರುವ ಸ್ಥಳದಲ್ಲಿ ಆರು ವರ್ಷಗಳ ಹಿಂದೆ ನಗರದಲ್ಲಿ ನೀರಿನ ಸಮಸ್ಯೆಯಾದಾಗ, ಆಯಾ ಪ್ರದೇಶದಲ್ಲಿಯೇ ಜಲಮೂಲ ಸೃಷ್ಟಿಸುವ ಉದ್ದೇಶದಿಂದ ಮಹಾ ನಗರ ಪಾಲಿಕೆಯಿಂದ ಈ ಆಳವಾದ ಬಾವಿ ತೋಡಲಾಗಿದೆ. ನೆಲ ಅಗೆದಿದ್ದು ಬಿಟ್ಟರೆ ಮಹಾನಗರ ಪಾಲಿಕೆ ಬೇರೇನೂ ಮಾಡಿಲ್ಲ. ಸದ್ಯ ಇದರೊಳಗೆ ಶೇಖರಣೆಗೊಂಡಿರುವ ನೀರಿನಲ್ಲಿ ಪಾಚಿ ಆವರಿಸಿದ್ದು, ಅಕ್ಕಪಕ್ಕದವರು ಕಸ ಎಸೆಯುತ್ತಿರುವುದರಿಂದ ವಾತಾವರಣ ಗಬ್ಬೆದ್ದು ಹೋಗಿದೆ.
ಬಾವಿ ತೋಡಿದ ಬಳಿಕ ನೀರು ಬಂತಾದರೂ ಮರು ವರ್ಷದಿಂದ ಬರಗಾಲದ ಸಮಸ್ಯೆ ದೂರಾಗಿದ್ದರಿಂದ ಪಾಲಿಕೆ ಈ ಬಾವಿಯನ್ನು ಮರೆತುಬಿಟ್ಟಿದೆ. ಸುತ್ತಲೂ ಕಟ್ಟೆ ಕಟ್ಟಬೇಕಾಗಿದ್ದ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟು, ಯಾರೂ ದಾಟಿ ಹೋಗದಂತೆ ಬ್ಯಾರಿಕೇಡ್ ಹಾಕಿ, ‘ಅಪಾಯ; ತೆರೆದ ಬಾವಿ ಇದೆ’ ಎಂದು ಫಲಕ ಹಾಕಲಾಗಿದೆ.
ಬಾವಿ ಪಕ್ಕದಲ್ಲಿಯೇ ಅಂಗನವಾಡಿಯೂ ಇದ್ದು, ಮಕ್ಕಳು ನಿತ್ಯವೂ ಈ ಬಾವಿ ಸುತ್ತಲೇ ಆಟವಾಡುತ್ತಾರೆ. ರಾತ್ರಿ ಹೊತ್ತಿನಲ್ಲಿ ಯಾರಾದರೂ ಈ ಕಡೆ ಬಂದಲ್ಲಿ ಬಾವಿಯಲ್ಲಿ ಬೀಳುವುದು ಖಚಿತ, ಇಲ್ಲಿಯೇ ಕಸವನ್ನು ಎಸೆಯುತ್ತಿರುವುದರಿಂದ ಬಾವಿಯೊಳಗೆ ಹಾವುಗಳು ವಾಸಿಸುತ್ತಿದ್ದು, ಅವು ಅಂಗನವಾಡಿಗೂ ನುಗ್ಗುವ ಆತಂಕವಿದೆ.
ಈ ಬಾವಿಯನ್ನು ತೋಡಿದಾಗ, ಇದನ್ನು ಚೆನ್ನಾಗಿ ನಿರ್ವಹಿಸುತ್ತೇವೆ ಎಂದು ಮಹಾನಗರ ಪಾಲಿಕೆಯವರು ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಇಲಾಖೆಯವರಿಗೆ ಭರವಸೆ ನೀಡಿದ್ದರು. ಆದರೆ, ಇದ್ಯಾವುದನ್ನೂ ಮಾಡಿಲ್ಲ. ಈ ಬಾವಿ ನಿರ್ವಹಣೆ ಮತ್ತು ಸುಧಾರಣೆ ಬಗ್ಗೆ ಇಲಾಖೆಯಿಂದ ಸಾಕಷ್ಟು ಸಲ ಪಾಲಿಕೆಗೆ ಪತ್ರ ಬರೆಯಲಾಗಿದೆ. ಇದಕ್ಕೆ ಈವರೆಗೆ ಭರವಸೆಯ ಉತ್ತರವೇ ಬಂದಿದೆ. ಸದ್ಯ ಇಲ್ಲಿರುವ ಹಳೆ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ಶೀಘ್ರ ಆರಂಭಗೊಳ್ಳಲಿದ್ದು, ಅದಕ್ಕೂ ಈ ಬಾವಿ ಅಡ್ಡಿಯಾಗಿ ಕುಳಿತಿದೆ.
ಬಾವಿ ಸುತ್ತ ಕಟ್ಟೆ ಕಟ್ಟಿ, ರಕ್ಷಣಾ ಪರದೆ ಅಳವಡಿಸಿದಲ್ಲಿ ಪ್ರತಿ ಮಳೆಗಾದಲ್ಲೂ ನೀರು ತುಂಬಿ ಉಪಯೋಗವಾಗುತ್ತಿತ್ತು. ಈ ಭಾಗದಲ್ಲಿನ ಬೋರವೆಲ್‌ಗಳ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತಿತ್ತು. ಪಾಲಿಕೆಗೆ ಮಾತ್ರ ಈ ಕಾಳಜಿ ಕಂಡು ಬರುತ್ತಿಲ್ಲ. ಹೀಗಾಗಿ ಅವಘಡ ಸಂಭವಿಸುವ ಮುನ್ನ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕಿದೆ.