ದಡ್ಡಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಪಿಡಿಒ ಮಾರುತಿ ಕಾಂಬಳೆ ಮಾತನಾಡಿದರು. ಲಕ್ಷ್ಮೀ ನಾಯಿಕ, ಉಪಾಧ್ಯಕ್ಷೆ ಸೀಮಾ ಗಡಕರಿ, ಸದಸ್ಯರಾದ ನಾರಾಯಣ ರೇಡಕರ ಇತರರಿದ್ದರು.
ದಡ್ಡಿ: ಮೂರು ವರ್ಷಗಳ ಬಳಿಕ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮಸಭೆ ಅಧಿಕಾರಿಗಳ ಗೈರುಹಾಜರಿಯಿಂದ ಗೊಂದಲದ ಗೂಡಾಯಿತು.
ಅಧಿಕಾರಿಗಳ ಈ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಸಿಬ್ಬಂದಿ ಗ್ರಾಮದಲ್ಲಿ ಚರಂಡಿ ಸ್ವಚ್ಛತೆಗೆ ಮುಂದಾಗುತ್ತಿಲ್ಲ, ಸರ್ಕಾರದ ಅನುದಾನ ಬಳಕೆಯಾಗುತ್ತಿಲ್ಲ, ಬೀದಿದೀಪ ಸರಿಯಾಗಿ ಉರಿಯುತ್ತಿಲ್ಲ. ಮೂರು ವರ್ಷದಿಂದ ಗ್ರಾಮ ಆಡಳಿತ ಅಧಿಕಾರಿ ಸರಿಯಾಗಿ ಗ್ರಾಮಕ್ಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಸಭೆಗೆ ಗೈರುಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾರುತಿ ಕಾಂಬಳೆ ಮಾತನಾಡಿ, ಸಭೆ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ನಾವು ನೋಟಿಸ್ ನೀಡಿದ್ದೇವೆ. ಗೈರುಹಾಜರಾದವರ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ನಾಯಿಕ, ಉಪಾಧ್ಯಕ್ಷೆ ಸೀಮಾ ಗಡಕರಿ, ಸದಸ್ಯರಾದ ನಾರಾಯಣ ರೇಡಕರ್, ಸಂಜೀವಿನಿ ಇಂಗವಳೆ, ನಸೀಮಾ ಬುಡ್ಡನ್ನವರ, ಮುನಿರುದ್ದೀನ್ ಶೇಖ, ವಂದನಾ ಘೋಸರವಾಡಕರ, ನೀಲಕಂಠ ಮಠಪತಿ, ಸಿದ್ಧಾರೂಢ ಮೊಕಾಶಿ ಇತರರಿದ್ದರು.