ಬೆಳಗಾವಿ: ವಾಟ್ಸಾಪ್‌ನಲ್ಲಿ ಮದುವೆ ಆಮಂತ್ರಣದ ಪಿಡಿಎಫ್ ಫೈಲ್ ರೀತಿಯಲ್ಲಿ ಎಪಿಕೆ ಫೈಲ್ ಕಳುಹಿಸಿ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಶಾಂತವ್ವ ಮರಿಗೌಡರ ಖಾತೆಗೆ ಕನ್ನ ಹಾಕಿರುವ ಸೈಬರ್ ಕಳ್ಳರು 2,17,705 ರೂ. ಬೇರೆ ಖಾತೆಗೆ ವರ್ಗಾಯಿಸಿಕೊಂಡಿರುವ ಬಗ್ಗೆ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.2ರಂದು ವಾಟ್ಸಾಪ್‌ಗೆ ಅಪರಿಚಿತರಿಂದ ಮದುವೆ ಆಮಂತ್ರಣ ಮಾದರಿಯಲ್ಲಿ ಬಂದಿದ್ದ ಎಪಿಕೆ ಫೈಲ್ ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ ಹ್ಯಾಕ್ ಮಾಡಿ, ಬ್ಯಾಂಕ್ ಖಾತೆಯಲ್ಲಿದ್ದ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಕ್ರಮ ಸಾರಾಯಿ ಮಾರಾಟ: ಹಿರೇಬಾಗೇವಾಡಿ ರೇಣುಕಾ ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ಕೆ.ಕೆ.ಕೊಪ್ಪದ ಗ್ರಾಮದ ರಾಜು ಬಸನ್ನವರ(33) ವಿರುದ್ಧ ಹಿರೇಬಾಗೇವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, 36,140 ರೂ. ಮೌಲ್ಯದ ಮದ್ಯ ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ.
ಗೋಕಾಕ ತಾಲೂಕಿನ ಕಡಬಗಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಸಾರಾಯಿ ಪೌಚ್‌ಗಳನ್ನು ಮಾರಾಟ ಮಾಡಲು ಹೊರಟಿದ್ದ ತವಗ ಗ್ರಾಮದ ಈರಪ್ಪ ಕಳ್ಳಿಬುದ್ದಿ, ಪುಂಡಲೀಕ ಗಸ್ತಿ, ಭೀಮಶಿ ಭೂಶಿ ಹಾಗೂ ಸತೀಶ ಮಾಳೆನ್ನವರ ವಿರುದ್ಧ ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, 41 ಲೀಟರ್ ಸಾರಾಯಿ, ಎರಡು ಬೈಕ್, ನಾಲ್ಕು ಮೊಬೈಲ್ ವಶಪಡಿಸಿಕೊಂಡಿದ್ದಾರೆ.