ಸವದತ್ತಿಯ ಕೋಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಸಗಡ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸುಭಾಸ ಏಣಗಿ, ಡಾ.ಪ್ರೇಮಾ ಯಾಕೊಳ್ಳಿ, ಶ್ರೇಯಸ್ ಮಾಮನಿ ಇತರರಿದ್ದರು.
- ಸುಭಾಸ ಏಣಗಿ ಮೆಚ್ಚುಗೆ
- ಪರಸಗಡ ನಾಟಕೋತ್ಸವ ಸಮಾರೋಪ
ಸವದತ್ತಿ: ಸಾಮಾಜಿಕ ಜಾಲತಾಣಗಳ ಅಬ್ಬರದ ಇಂದಿನ ದಿನಗಳಲ್ಲಿಯೂ ಜನರಿಗೆ ರಂಗಭೂಮಿ ರಸದೌತಣ ಉಣಬಡಿಸುತ್ತಿರುವ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಕಾರ್ಯ ಶ್ಲಾಘನೀಯ ಎಂದು ಸುಭಾಸ ಏಣಗಿ ಹೇಳಿದರು.
ನಗರದ ದೇಸಾಯಿ ಕೋಟೆ ಆವರಣದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಸಗಡ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದಲ್ಲಿ ಚಿಂತನೆ ಮತ್ತು ಸಂಸ್ಕೃತಿ ಅರಿವು ಮೂಡಿಸುವ ಶಕ್ತಿಯುತ ಮಾಧ್ಯಮ ರಂಗಭೂಮಿ.
ಹೀಗಾಗಿ, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಡಾ.ಪ್ರೇಮಾ ಯಾಕೋಳ್ಳಿ ಮಾತನಾಡಿ, ಪ್ರತಿ ವರ್ಷ ನಾಟಕ ಪ್ರದರ್ಶಿಸುವ ಮೂಲಕ ಹೊಸ ಕಲಾವಿದರಿಗೆ ವೇದಿಕೆ ಒದಗಿಸುತ್ತಿರುವ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ರಂಗಭೂವಿ ಉಳಿವಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ನಾಡೋಜ, ನಾಟ್ಯಭೂಷಣ ಏಣಗಿ ಬಾಳಪ್ಪ ಅವರ ಸ್ಮರಣಾರ್ಥ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಪ್ರದರ್ಶಿಸಲಾಯಿತು. ಪ್ರಭಾವತಿ ತುರಮರಿ, ಸುಮತಿ ಮೊಕಾಶಿ, ಪಲ್ಲವಿ ಪದಕಿ, ಶ್ರೇಯಸ್ ಮಾಮನಿ, ಎಂ.ಬಿ.ದ್ಯಾಮನಗೌಡ್ರ, ನಾಗರಾಜ ಬೊನಗೇರಿ, ಜಾವೇದ ಪಟಾತ, ಡಾ.ಸವಿತಾ ಸಬನೀಸ್ ಇತರರಿದ್ದರು.