ಬೆಳಗಾವಿ ಶಿವಬಸವ ನಗರದ ಎಸ್.ಜಿ.ಸಂಬರಗಿಮಠ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಉದ್ಘಾಟಿಸಿದರು. ಡಾ.ಅಲ್ಲಪ್ರಭು ಸ್ವಾಮೀಜಿ, ಪ್ರೀತಿ ಕಾಮಕರ, ಹನುಮಂತ ಕೊಂಗಾಲಿ ಇತರರಿದ್ದರು.
ಬೆಳಗಾವಿ: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಸಮಾಜಕ್ಕೆ ಸಹಾಯ ಮಾಡುವ ಸೇವಾ ಗುಣ ನಮ್ಮಲ್ಲಿರಬೇಕು. ಇದು ಮಾನವೀಯತೆಯ ಅತ್ಯುನ್ನತ ಮೌಲ್ಯವಾಗಿದೆ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.
ಶಿವಬಸವ ನಗರದ ಎಸ್.ಜಿ.ಸಂಬರಗಿಮಠ ಸಭಾಭವನದಲ್ಲಿ ಲಿಂಗೈಕ್ಯ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಮಹಿಳಾರತ್ನ ಹಾಗೂ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸೇವಾ ಮನೋಭಾವ ನಮ್ಮಲ್ಲಿ ಸಹಾನುಭೂತಿ, ಕರುಣೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಪ್ರೀತಿ, ವಾತ್ಸಲ್ಯ ಹಾಗು ಸೇವಾಮನೋಭಾವದಿಂದ ಕೂಡಿದ ಆದರ್ಶ ಬದುಕು ನಮ್ಮದಾಗಬೇಕು ಎಂದರು. ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಹಿಳಾ ರತ್ನ ಮತ್ತು ಬೆಳಗಾವಿ ಮಹಿಳಾ ಕಲ್ಯಾಣ ಸಂಸ್ಥೆಯ ಎಂ.ಎಸ್.ಚೌಗುಲಾ ಮತ್ತು ವೈಜಯಂತಿ ಚೌಗುಲಾಗೆ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ವಿಶೇಷ ಸಾಧನೆ ಮಾಡಿದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಸಂಜನಾ ನಡುವಿನಮನಿ, ನಿಹಾರಿಕಾ ಈಟಿ, ಪ್ರತೀಕ್ಷಾ ಪೂಜಾರಿ, ಚೈತನ್ಯ ಕೇದಾರ, ಶ್ರೇಯಾ ಅಮಾತೆ, ಅಂಜನಾಜಾಯಿ ಮತ್ತು ರಾಧಿಕಾ ಲಮಾಣಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹನುಮಂತ ಕೊಂಗಾಲಿ, ಸಾಹಿತಿ ಪ್ರೇಮಾ ಅಂಗಡಿ, ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಅನಿತಾ ಪಾಟೀಲ, ರಾಜಶೇಖರ ಪಾಟೀಲ ಇತರರಿದ್ದರು.