ಬೆಳಗಾವಿ ಕ್ರೈಡ್ರೆನ ಯುವರಾಜ ಹುಲಜಿ ಮತ್ತು ಪ್ರಶಾಂತ ವಾಂಡಕರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಮನವಿ ಸಲ್ಲಿಸಿದರು.
ಬೆಳಗಾವಿ : ಇ-ಖಾತಾ ಮತ್ತು ಕಾವೇರಿ-2 ತಂತ್ರಾಂಶದಲ್ಲಿ ಈಚೆಗೆ ಮಾಡಲಾಗಿರುವ ಬದಲಾವಣೆಗಳಿಂದ ಬೆಳಗಾವಿಯ ಕೆಲವು ಪ್ರದೇಶಗಳ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಬೆಳಗಾವಿಯ ಕ್ರೆಡೈ ಮನವಿ ಮಾಡಿದೆ.
ಕ್ರೆಡೈ ಅಧ್ಯಕ್ಷ ಯುವರಾಜ ಹುಲಜಿ ಮತ್ತು ಕಾರ್ಯದರ್ಶಿ ಪ್ರಶಾಂತ ವಾಂಡಕರ್ ನೇತೃತ್ವದ ನಿಯೋಗದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.
ಈ ಎರಡೂ ವ್ಯವಸ್ಥೆಯಲ್ಲಿನ ತಾಂತ್ರಿಕ ಹಾಗೂ ಕಾರ್ಯನಿರ್ವಹಣಾ ಸಮಸ್ಯೆಗಳಿಂದ ಬೆಳಗಾವಿಯ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ. ನಾಗರಿಕರು, ಬಿಲ್ಡರ್‌ಗಳು, ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ನಿರಂತರ ಪಟ್ಟಾ ಆಸ್ತಿಗಳಿಗೆ ಸಂಬಂಧಿಸಿದ ಸಮಸ್ಯೆ ಅತ್ಯಂತ ಗಂಭೀರವಾಗಿದ್ದು, ತಾಂತ್ರಿಕ ಅಡಚಣೆಗಳಿಂದ ಬಗೆಹರಿಯದಾಗಿದೆ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ.
ಹಿಂದೆ 70ರಿಂದ 100 ವರ್ಷಗಳ ಹಿಂದೆ ನೀಡಲಾದ ಈ ಆಸ್ತಿಗಳಲ್ಲಿ ಮೂಲ ಭೂಮಾಲೀಕರ ಹೆಸರುಗಳು ಇಂದಿಗೂ ಸಿಟಿಎಸ್ ದಾಖಲೆಗಳಲ್ಲಿ ಉಳಿದಿದೆ. ಕಾವೇರಿ-2 ಮತ್ತು ಇ-ಆಸ್ತಿ ಸಂಯೋಜನೆಯ ನಂತರ ಮೂಲ ಭೂಮಾಲೀಕರನ್ನೇ ಮಾಲೀಕರಾಗಿ ತೋರಿಸಲಾಗುತ್ತಿದೆ. ಹಾಲಿ ಬಾಡಿಗೆ ಹಕ್ಕುದಾರರನ್ನು ಕೇವಲ ತೆರಿಗೆದಾರರಾಗಿ ನಮೂದಿಸಲಾಗುತ್ತಿದೆ. ಇದರಿಂದ ಮೂಲ ಮಾಲೀಕರು ಅಥವಾ ಅವರ ವಾರಸುದಾರರ ಸಮ್ಮತಿ ಕಡ್ಡಾಯವಾಗಿದ್ದು, ಅನೇಕರು ನಿಧನರಾಗಿರುವುದರಿಂದ ಅಥವಾ ವಾರಸುದಾರರನ್ನು ಪತ್ತೆಹಚ್ಚುವುದು ಅಸಾಧ್ಯವಾಗಿರುವುದರಿಂದ ನೋಂದಣಿ ಪ್ರಕ್ರಿಯೆ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಎರಡೂ ತಂತ್ರಾಂಶಗಳ ಸಮಸ್ಯೆಯಿಂದ 2025-26ನೇ ಹಣಕಾಸು ವರ್ಷದಲ್ಲಿ ವಿಶೇಷವಾಗಿ ಕೊನೆಯ ತ್ರೈಮಾಸಿಕದಲ್ಲಿ ಸರ್ಕಾರಕ್ಕೆ ಸುಮಾರು ರೂ. 5,000 ಕೋಟಿ ಆದಾಯ ನಷ್ಟವಾಗಿರಬಹುದು. ಆಸ್ತಿ ನೋಂದಣಿಗಳು ಕುಸಿದಿರುವುದರಿಂದ ಬಿಲ್ಡರ್‌ಗಳು ಹಣಕಾಸಿನ ಒತ್ತಡ ಎದುರಿಸುತ್ತಿದ್ದಾರೆ. ಮನೆ ಖರೀದಿದಾರರು ಮಾಲೀಕತ್ವ ಪಡೆಯಲು ಸಾಧ್ಯವಾಗುತ್ತಿಲ್ಲ. ದಾಖಲೆಗಳಲ್ಲಿನ ವ್ಯತ್ಯಾಸದಿಂದ ಬ್ಯಾಂಕುಗಳೂ ಸಾಲ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ. ಇದರ ನೇರ ಪರಿಣಾಮ ನಿರ್ಮಾಣ ಕ್ಷೇತ್ರದ ವಿವಿಧ ಕಾರ್ಮಿಕರು, ಕೆಲಸಗಾರರ ಮೇಲಾಗಿದೆ. ಹೀಗಾಗಿ ಅದಷ್ಟು ಬೇಗ ಈ ಸಮಸ್ಯೆ ಪರಿಹರಿಸಿ ಎಂದು ಕೇಳಿಕೊಂಡಿದ್ದಾರೆ.