ಹಲ್ಯಾಳ ಗ್ರಾಮದ ಶಿವಲಿಂಗೇಶ್ವರ ನಗರದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿರುವುದು.
ಅಥಣಿ ಗ್ರಾಮೀಣ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ದಂಪತಿ ಗಂಭೀರ ಗಾಯಗೊಂಡಿರುವ ಘಟನೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಶಿವಲಿಂಗೇಶ್ವರ ನಗರದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಧನಪಾಲ ಕಾಂಬಳೆ, ಅನಸೂಯಾ ಕಾಂಬಳೆ ಗಾಯಗೊಂಡವರು. ಮನೆಯಲ್ಲಿ ದಂಪತಿಯಷ್ಟೇ ಇದ್ದರು. ಬೆಳಗ್ಗೆ ಅನಸೂಯಾ ಚಹಾ ಮಾಡಲು ಸಿಲಿಂಡರ್ ಹೊತ್ತಿಸುವ ವೇಳೆ ಸ್ಫೋಟಗೊಂಡಿದ್ದು, ಮನೆಯ ಪತ್ರಾಸ್ ಹಾರಿವೆ. ಬಟ್ಟೆಗಳು ಸುಟ್ಟು, ದಿನಸಿ ವಸ್ತುಗಳಿಗೆ ಹಾನಿಯಾಗಿವೆ. ಗಾಯಾಳುಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸಾಂಗಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಥಣಿ ಠಾಣೆ ಹವಾಲ್ದಾರ ಪ್ರಕಾಶ ಪಾಟೀಲ, ಸಿಬ್ಬಂದಿ ಕರಿಗಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ಯಾಸ್ ಕಂಪನಿಯಿಂದ ಸಿಗುವ ಸವಲತ್ತನ್ನು ಸಂತ್ರಸ್ತರಿಗೆ ನೀಡಲು ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಸಿಧರಾಯ ಭೋಸಗಿ ವಿಜಯವಾಣಿಗೆ ತಿಳಿಸಿದ್ದಾರೆ.