ಬೆಳಗಾವಿಯಲ್ಲಿ ಶುಕ್ರವಾರ ಜರುಗಿದ ಬಾಲ ಕಾರ್ಮಿಕ ವಿರೋಧಿ ದಿನ ಉದ್ಘಾಟನೆಯಲ್ಲಿ ಕೆ.ಎನ್.ಶಿವಕುಮಾರ, ರೋಹಿತ ಸಿಂಗ್, ನಾಗೇಶ, ಸುಶೀಲಾ, ಮಲ್ಲಿಕಾರ್ಜುನ ಜೋಗೂರ, ರವಿ ಬಂಗಾರಪ್ಪನವರ ಇತರರಿದ್ದರು. 
ಬೆಳಗಾವಿ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲ ಇಲಾಖೆಗಳ ಸಮನ್ವಯ ಅಗತ್ಯ

ಬೆಳಗಾವಿ : ಬಾಲಕಾರ್ಮಿಕ ಪದ್ಧತಿ ಕಾಯ್ದೆ ಜಾರಿಗೆ ಬಂದು ಸುಮಾರು ನಲವತ್ತು ವರ್ಷಗಳಾದರೂ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದೆ. ಇದರ ನಿರ್ಮೂಲನೆಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ ಹೇಳಿದರು.
ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಉದ್ಘಾಟಿಸಿ ಮಾತನಾಢಿದ ಅವರು, ಬಾಲಕಾರ್ಮಿಕತೆಯಲ್ಲಿ ಸಿಲುಕುವ ಬಹುತೇಕರು ಬಡ ಕುಟುಂಬಗಳ ಮಕ್ಕಳಾಗಿದ್ದಾರೆ. ಹೀಗಾಗಿ, ಅಧಿಕಾರಿಗಳು ಕೇವಲ ಪ್ರಕರಣ ದಾಖಲಿಸದೇ, ಅಂತಹ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊಬೇಷನರಿ ಐಎಎಸ್ ಅಧಿಕಾರಿ ರೋಹಿತ ಸಿಂಗ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ಕೇವಲ ಕಾನೂನು ಜಾರಿಗೆ ಸೀಮಿತವಾಗದೆ, ಬಾಲಕಾರ್ಮಿಕತೆಯ ಜಾಲದಿಂದ ಮುಕ್ತರಾದ ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು ಎಂದು ಸಲಹೆ ನೀಡಿದರು.
ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ನಾಗೇಶ ಡಿ.ಜಿ., ಸ್ಪಂದನ ಸಂಸ್ಥೆಯ ನಿರ್ದೇಶಕಿ ಸುಶೀಲಾ, ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗೂರ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕ್ಷಿ ನಿರ್ಮಲಾ ಪಾಟೀಲ, ಡಿಎಚ್‌ಒ ಈಶ್ವರ ಗಡಾದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನ ಕುಮಾರ, ಸಹಾಯಕ ಕಾರ್ಮಿಕ ಆಯುಕ್ತ ಕೆ.ಪಿ.ನಾಗರಾಜ, ರಾಜೇಶ ಜಾಧವ , ಸಂಜೀವ ಬೋಸ್ಲೆ, ರಾಜೇಶ ಅಸ್ನೋಟಿಕರ, ರಮೇಶ ಕೆಸರೂರು, ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ ಇತರರಿದ್ದರು.