ಚಿಕ್ಕೋಡಿ ತಾಲೂಕಿನ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಲಿಕವಾಡ-ದತ್ತವಾಡ ಸೇತುವೆ ಮುಳುಗಡೆಯಾಗಿರುವುದು. 
ಬೆಳಗಾವಿ

ಮುಂದುವರಿದ ವರುಣಾರ್ಭಟ

ಬೆಳಗಾವಿ/ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಕೃಷ್ಣಾ ನದಿ ಒಳ ಹರಿವು ಹೆಚ್ಚಾಗಿದೆ. ಇದರಿಂದ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ಕೆಳ ಹಂತದ ಏಳು ಸೇತುವೆ ಮುಳುಗಡೆಯಾಗಿವೆ.
ಕೊಯ್ನ ಜಲಾಶಯಕ್ಕೆ ಅಪಾರ ನೀರು ಬರುತ್ತಿರುವುದರಿಂದ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ 60 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜತೆಗೆ ವೇದಗಂಗಾ, ದೂಧಗಂಗಾ ನದಿಗಳ ನೀರು ಸೇರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಒಟ್ಟು 78 ಸಾವಿರ ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.
7 ಸೇತುವೆ ಮುಳುಗಡೆ: ನಾಲ್ಕೈದು ದಿನದಿಂದ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ, ಘಟಪ್ರಭಾ ನದಿಗಳು ಮೈತುಂಬಿ ಹರಿಯುತ್ತಿವೆ. ಪರಿಣಾಮ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೋಳ, ನಿಪ್ಪಾಣಿ ತಾಲೂಕಿನ ದೂಧಗಂಗಾ ನದಿಯ ಭೋಜ-ಕಾರದಗಾ, ವೇದಗಂಗಾ ನದಿಯ ಭೋಜ-ಕುನ್ನೂರ, ಸಿದ್ನಾಳ-ಅಕ್ಕೋಳ, ಜಾತ್ರಾಟ-ಭಿವಶಿ, ಹುನ್ನರಗಿ-ಮಮದಾಪುರ ಮತ್ತು ಬಾರವಾಡ-ಕುನ್ನೂರ ಸೇತುವೆಗಳು ಮುಳುಗಡೆಯಾಗಿದ್ದು, ಗ್ರಾಮಸ್ಥರು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಮಳೆ ಮುಂದುವರಿದರೆ ಇನ್ನಷ್ಟು ಕೆಳ ಹಂತದ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ.
ಎಮ್ಮೆ ಸಾವು: ಸತತ ಮಳೆಯಿಂದ ಸೋಮವಾರ ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮದ ಲಕ್ಷ್ಮಣ ಕಂಠಿಬಾಳಿ ಅವರ ದನದ ಕೊಟ್ಟಿಗೆಯ ಗೋಡೆ ಕುಸಿದು ಎಮ್ಮೆ ಮೃತಪಟ್ಟಿದೆ.