ಬೆಳಗಾವಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈರಣ್ಣ ಕಡಾಡಿ ಮಾತನಾಡಿದರು. ಬಿ.ಓ. ಮಹೇಶ್ವರಪ್ಪ, ಮಂಜುನಾಥ ಹೊಂಗಲ ಇತರರಿದ್ದರು. 
ಬೆಳಗಾವಿ

ರೈತರಿಂದ ಧಾನ್ಯ ಖರೀದಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ

ರಾಜ್ಯ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದ ರೈತರು ಬೆಳೆದ ಆಹಾರ ಧಾನ್ಯಗಳನ್ನು ಖರೀದಿಸುವ ಸಂಪೂರ್ಣ ವಿಫಲವಾಗಿದೆ. ಆಹಾರ ಧಾನ್ಯ ನೀಡಿದ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿಲ್ಲ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಈರಣ್ಣ ಕಡಾಡಿ ದೂರಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 2.57 ಲಕ್ಷ ರಾಗಿ ಬೆಳೆದ ರೈತರು ನೋಂದಣಿ ಮಾಡಿಕೊಂಡಿದ್ದರು. ಈ ರೈತರಿಂದ 5.69 ಲಕ್ಷ ಟನ್ ಮಾತ್ರ ಖರೀದಿ ಮಾಡಿದ್ದಾರೆ. ಜೋಳ ಬೆಳೆದ 46 ಸಾವಿರ ರೈತರು ನೋಂದಣಿ ಮಾಡಿದ್ದಾರೆ. ಈ ರೈತರಿಂದ 2.21 ಲಕ್ಷ ಟನ್ ಜೋಳ ಹಾಗೂ 5,670 ಟನ್ ಭಕ್ತ ಖರೀದಿ ಮಾಡಲಾಗಿದೆ. ಇನ್ನೂಳಿದ ಆಹಾರ ಧಾನ್ಯಗಳನ್ನು ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಿತ್ತೂರು ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಗೋವಿನ ಜೋಳ ಬೆಳೆಯುವ ರೈತರಿದ್ದಾರೆ. ಆದರೆ, ಇಲ್ಲಿಯವರೆಗೆ ರೈತರ ನೆರವಿಗೆ ಬಂದಿರುವುದಿಲ್ಲ. ಮಧ್ಯವರ್ತಿಗಳು, ವ್ಯಾಪಾರಿಗಳಿಗೆ ಬೆಂಬಲ ಬೆಲೆ ಯೋಜನೆಯ ಲಾಭವಾಗುತ್ತಿದೆ.ಆದರೆ, ರೈತರಿಗೆ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ನೋಂದಣಿ ಮಾಡಿಕೊಂಡಿದ್ದ ಎಲ್ಲ ರೈತರಿಂದ ಬೆಳೆಗಳ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಭಾರತೀಯ ಆಹಾರ ನಿಗಮ ಪ್ರಾರಂಭವಾದಾಗಿನಿಂದ ಎಲ್ಲ ದಾಖಲೆಗಳನ್ನು ಮುರಿದು 54.5 ಲಕ್ಷ ಮೆ.ಟನ್ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಸರಬರಾಜು ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಗೋದಾಮುಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಿ ಮೂಡಲಕ ಉತ್ತಮ ಗೋದಾಮು ಎಂದು ಬೆಳಗಾವಿ ಡಿಪೋ ಪ್ರಶಸ್ತಿ ಬಂದಿದೆ ಎಂದು ಹೇಳಿದರು.
ಎಫ್‌ಸಿಐ ಜನರಲ್ ಮ್ಯಾನೇಜರ್ ಬಿ.ಓ. ಮಹೇಶ್ವರಪ್ಪ, ಹುಬ್ಬಳ್ಳಿ ವಿಭಾಗ ವ್ಯವಸ್ಥಾಪಕ ಮಂಜುನಾಥ ಹೊಂಗಲ, ಹುಬ್ಬಳ್ಳಿವಿಭಾಗ ವ್ಯವಸ್ಥಾಪಕ ಭಕ್ತವತ್ಸಲ, ಸಲಹಾ ಸಮಿತಿ ಸದಸ್ಯರಾದ ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ ಇತರರಿದ್ದರು.