ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಕ್ರಾಸ್‌ದಲ್ಲಿನ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಜರುಗಿದ ಸಾಮೂಹಿಕ ವಿವಾಹದಲ್ಲಿ ಅರುಣಾದೇವಿ, ಗುರುಸಿದ್ಧ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯರು, ಅಮರಸಿದ್ಧೇಶ್ವರ ಸ್ವಾಮೀಜಿ, ಶಿವಮೂರ್ತಿ ಸ್ವಾಮೀಜಿ, ಮಂಗಲ ಅಂಗಡಿ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ ಇತರರಿದ್ದರು.  
ಬೆಳಗಾವಿ

ಸಾಮೂಹಿಕ ವಿವಾಹ ಮಾಡಿಸುವುದು ಆದರ್ಶ ಕಾರ್ಯ

ಬೆಳಗಾವಿ : ವಿವಾಹವೆಂದರೆ ಅದ್ದೂರಿ ಮೆರವಣಿಗೆ, ಭೂರಿ ಭೋಜನ, ಡಾಲ್ಬಿ ಗಳ ಸಂಗೀತ ಹೀಗೆ ಆಡಂಬರದಲ್ಲಿ ಆಚರಿಸುವ ಈ ದಿನಮಾನದಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸುವುದು ಆದರ್ಶ ಕಾರ್ಯವಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಪುತ್ರಿ ಅರುಣಾದೇವಿ ಹೇಳಿದರು.
ಬೈಲಹೊಂಗಲ ತಾಲೂಕಿನ ಗದ್ದಿ ಕರವಿನಕೊಪ್ಪ ಕ್ರಾಸ್ ಬಳಿಯ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸದಾ ಸರಳತೆಗೆ ಹೆಸರುವಾಸಿಯಾಗಿದ್ದ ಯಡಿಯೂರಪ್ಪನವರ ಹೆಸರಿನಲ್ಲಿ ಪ್ರಾರಂಭವಾದ ಈ ಕಲ್ಯಾಣ ಮಂಟಪದಲ್ಲಿ ಅತ್ಯಂತ ಸರಳವಾಗಿ ಸಾಮೂಹಿಕ ವಿವಾಹ ಜರುಗುತ್ತಿರುವುದು ಸಂತಸದ ವಿಷಯ ಎಂದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ದಾಂಪತ್ಯ ಕೇವಲ ಇಬ್ಬರು ವ್ಯಕ್ತಿಗಳ ಬಂಧವಲ್ಲ. ಎರಡು ಮನಸ್ಸುಗಳ ಸಮ್ಮಿಲನವಾಗಿದೆ. ನಂಬಿಕೆ, ಗೌರವ, ಹೊಂದಾಣಿಕೆ ಮತ್ತು ತ್ಯಾಗದ ಬುನಾದಿಯ ಮೇಲೆ ದಾಂಪತ್ಯ ಜೀವನ ನಡೆಸಿದರೆ ಆದರ್ಶಮಯವಾಗಿರುತ್ತದೆ ಎಂದು ಆಶೀರ್ವಚನ ನೀಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ, ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ಮತ್ತು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ಸಂಸದೆ ಮಂಗಲ ಅಂಗಡಿ, ಆಯೋಜಕ ಗುರುದೇವ ಪಾಟೀಲ, ಸುಭಾಷ ಪಾಟೀಲ, ಶಿವಾಜಿ ಸುಂಠಕರ, ಲಕ್ಷ್ಮೀ ವಿಕ್ರಂ ಇನಾಮಾದಾರ, ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ವಿರೂಪಾಕ್ಷ ಯಮಕನಮರಡಿ, ವಿದ್ಯಾ ಭಾರತಿ ಪ್ರಾಂತ ಸಂಯೋಜಕ ಪರಮೇಶ್ವರ ಹೆಗಡೆ, ಎನ್.ಬಿ.ನಿರ್ವಾಣಿ, ಡಾ.ರವಿ ಪಾಟೀಲ, ಕಿರಣ ಜಾಧವ, ರತ್ನಪ್ರಭಾ ಬೆಲ್ಲದ, ಸುರೇಶ ಯಾದವ, ರಾಹುಲ ಗುರುದೇವ ಪಾಟೀಲ ಇತರರಿದ್ದರು.