ಸವದತ್ತಿ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಸಿದ್ಧರಾಮ ಟಿ., ಕೃಷ್ಣಪ್ಪ ಪಮ್ಮಾರ ಉದ್ಘಾಟಿಸಿದರು. ರತ್ನಾ ಕದಂ, ಸಾವಿತ್ರಿ ಶಿಭಾರಗಟ್ಟಿ ಇತರರಿದ್ದರು. 
ಬೆಳಗಾವಿ

ನಿರ್ಭೀತಿಯಿಂದ ದೂರು ನೀಡಿ

ಅರ್ಚನಾ ಜಾಧವ
ಸವದತ್ತಿ: ಕೆಲಸದ ಸ್ಥಳದಲ್ಲಿ ಮಹಿಳೆಯರು ಯಾವುದೇ ರೀತಿಯ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ನಿರ್ಭೀತಿಯಾಗಿ ದೂರು ನೀಡಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಿದ್ದರಾಮ ಟಿ. ಹೇಳಿದರು.
ನಗರದ ತಾಪಂ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸುರಕ್ಷತೆಗಾಗಿ 2013ರ ಕಾಯ್ದೆಯಡಿ ಕಠಿಣ ಕಾನೂನು ಜಾರಿಯಲ್ಲಿವೆ. 10ಕ್ಕಿಂತ ಹೆಚ್ಚು ನೌಕರರಿರುವ ಪ್ರತಿ ಕಚೇರಿಯಲ್ಲೂ ಆಂತರಿಕ ದೂರು ಸಮಿತಿ (ಐಸಿಸಿ) ರಚನೆ ಕಡ್ಡಾಯವಾಗಿದೆ. ಮಹಿಳೆಯರು ಕಿರುಕುಳಕ್ಕೆ ಒಳಗಾದಲ್ಲಿ 3ರಿಂದ 6 ತಿಂಗಳೊಳಗೆ ದೂರು ದಾಖಲಿಸಲು ಅವಕಾಶವಿದ್ದು, ಈ ಕಾನೂನು ಮಹಿಳೆಯರ ಘನತೆ ಮತ್ತು ಸುರಕ್ಷತೆ ಕಾಪಾಡುವ ಸದುದ್ದೇಶ ಹೊಂದಿದೆ ಎಂದು ತಿಳಿಸಿದರು.
ಒಂದನೇ ಹೆಚ್ಚುವರಿ ಜೆಎಂಎ್ಸಿ ನ್ಯಾಯಾಧೀಶ ಕೃಷ್ಣಪ್ಪ ಪಮ್ಮಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರತ್ನಾ ಕದಂ, ವಕೀಲರ ಸಂಘದ ಮಹಿಳಾ ಪ್ರತಿನಿಧಿ ಸಾವಿತ್ರಿ ಶಿಭಾರಗಟ್ಟಿ, ಬ್ಲಾಕ್ ಆರೋಗ್ಯ ಶಿಕ್ಷಣಾಧಿಕಾರಿ ರಾಜೇಂದ್ರ ಚೆಟ್ನಿಸ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮೃತ ಸಾಣಿಕೊಪ್ಪ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್.ಹುಬ್ಬಳ್ಳಿ, ಎಸ್.ಎಸ್.ಕಾಳಪ್ಪನವರ ಇತರರಿದ್ದರು.