ಬೆಳಗಾವಿಯಲ್ಲಿ ಹಾಸ್ಯ ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಡಾ.ಅರವಿಂದ ಕುಲಕರ್ಣಿ, ಪಿ.ಬಿ.ಸ್ತಾಮಿ, ಗುಂಡೇನಟ್ಟಿ ಮಧುಕರ, ರಾಮಚಂದ್ರ ಕಟ್ಟಿ ಇತರರಿದ್ದಾರೆ. 
ಬೆಳಗಾವಿ

ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತವೆ

ಡಿ.ವಿ. ಕಮ್ಮಾರ
ಬೆಳಗಾವಿ : ಇಂದಿನ ಯುವ ಪೀಳಿಗೆ ಸಂಗೀತ, ಸಾಹಿತ್ಯ, ನಾಟಕಗಳ ಅಭಿರುಚಿ ಕಳೆದುಕೊಳ್ಳುತ್ತಿದೆ. ಈ ಯುವಪಡೆಯನ್ನು ಪುನಃ ಸಾಂಸ್ಕೃತಿ ಲೋಕದತ್ತ ಮುಖ ಮಾಡಿಸುವ ಪ್ರಯತ್ನಗಳಾಗಬೇಕಿದ್ದು, ಅದಕ್ಕಾಗಿ ಕ್ರಿಯಾತ್ಮಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಬೇಕು. ಇದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ ರಂಗಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ಹೇಳಿದರು.
ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಹಾಸ್ಯ ಭಾಷಣ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ಪ್ರತಿ ತಿಂಗಳ ಎರಡನೇ ಶನಿವಾರ ತಪ್ಪದೇ ಹಾಸ್ಯಕ್ಕೆ ಸಂಬಂಧಿಸಿದ ಹರಟೆಗಳ ವಾಚನ, ವ್ಯಂಗಚಿತ್ರಗಳ ಪ್ರದರ್ಶನದಂತಹ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುವ ಹಾಸ್ಯಕೂಟವು ದಾಖಲೆಯನ್ನೇ ನಿರ್ಮಿಸಿದೆ ಎಂದು ಶ್ಲಾಘಿಸಿದರು.
ಹಿರಿಯ ಲೇಖಕ ಪಿ.ಬಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ, ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ, ಬಿ.ಎ.ಪಾಟೀಲ, ತವನಪ್ಪ ದೇಸಾಯಿ, ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ವಿ.ಎನ್.ಜೋಶಿ, ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಡಾ.ಜಯಂತ ಕಿತ್ತೂರ ಇತರರಿದ್ದರು.
ವಿಜೇತರು: ಸ್ಪರ್ಧೆಯಲ್ಲಿ ಕೆಎಲ್‌ಇ ಪ್ರೌಢಶಾಲೆಯ ಕುಮಾರ ನಿಖಿಲ ಮಾಶೆಟ್ಟಿ ಪ್ರಥಮ, ಬಿ.ಕೆ.ಮಾಡೆಲ್ ಪ್ರೌಢಶಾಲೆಯ ಕಾವ್ಯಶ್ರೀ ಸವದತ್ತಿ ದ್ವಿತೀಯ ಮತ್ತು ಮಾವಿನಕಟ್ಟಿ ಸರ್ಕಾರಿ ಪ್ರೌಢಶಾಲೆಯ ಸಂಜೀವಿನಿ ಕೋಲಕಾರ ತೃತೀಯ ಸ್ಥಾನ ಪಡೆದರು. ಕೆಜಿಎಸ್ ನಂ.5ರಶ್ರೇಯಾ ಬೇವಿನಗಿಡದ ಮತ್ತು ಸ್ಪೂರ್ತಿ ಕಾಮಕರ, ಸರ್ಕಾರಿ ಸರಸ್ವತಿ ಬಾಲಕಿಯರ ಪ್ರೌಢಶಾಲೆಯ ವೈಷ್ಣವಿ ಭಸ್ಮೆ ಮತ್ತು ರಾಜೇಶ್ವರಿ ಮತ್ತಿಕೊಪ್ಪ, ಹಡಗಿನಹಾಳ ಸರ್ಕಾರಿ ಪ್ರೌಢಶಾಲೆಯ ಪ್ರಜ್ವಲ ಜಕಬಾಳ ಪ್ರಮಾಣ ಪತ್ರ ಪಡೆದುಕೊಂಡರು. ಅರವಿಂದ ಹುನಗುಂದ ಮತ್ತು ತಾನಾಜಿ ಸ್ಪರ್ಧೆಯ ನಿರ್ಣಾಯಕರಾಗಿದ್ದರು. ಎಂ.ಬಿ.ಹೊಸಳ್ಳಿ ನಿರೂಪಿಸಿದರು.