ಎತ್ತಿನಗಾಡಿ ಓಟ 
ಬೆಳಗಾವಿ

ಎತ್ತಿನ ಓಟದ ಅನುಮತಿಗೆ ಸಮಿತಿ ರಚನೇ

ಬೆಳಗಾವಿ: ಜಿಲ್ಲೆಯಲ್ಲಿ ಎತ್ತಿನ ಓಟ, ಎತ್ತಿನಗಾಡಿ ಓಟ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕ್ರೀಡೆಗಳನ್ನು ಆಯೋಜಿಸಲು ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ನಿಯಮಾನುಸಾರ ಅಭಿಪ್ರಾಯ ಹಾಗೂ ಶಿಫಾರಸು ವರದಿ ಸಲ್ಲಿಸಲು ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದು, ಆಯಾ ತಾಲೂಕಿನ ತಹಶೀಲ್ದಾರರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಂಬಂಧಪಟ್ಟ ಪ್ರದೇಶದ ವೃತ್ತ ಪೊಲೀಸ್ ನಿರೀಕ್ಷಕರು, ತಾಲ್ಲೂಕಿನ ಕ್ರೀಡಾ ತರಬೇತುದಾರರು, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಪ್ರತಿನಿಧಿಗಳು ಸದಸ್ಯರಾಗಿರಲಿದ್ದು, ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಎತ್ತಿನ ಓಟ ಅಥವಾ ಎತ್ತಿನಗಾಡಿ ಓಟ ಆಯೋಜಿಸಲು ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಕಾರ್ಯಕ್ರಮದ ದಿನಾಂಕ, ಸಮಯ, ಸ್ಥಳ, ಆಯೋಜಕರ ವಿವರ, ಎತ್ತು ಹಾಗೂ ಎತ್ತಿನಗಾಡಿಗಳ ಸಂಖ್ಯೆ, ಪಶುವೈದ್ಯಕೀಯ ವಿವರಗಳು ಸೇರಿದಂತೆ ಹಲವು ಅಂಶಗಳನ್ನು ಸಮಿತಿ ಪರಿಶೀಲಿಸಲಿದೆ.

ಅಲ್ಲದೆ, ಓಟ ನಡೆಯುವ ಟ್ರ್ಯಾಕ್‌ನ ಉದ್ದ–ಅಗಲ, ಸಾರ್ವಜನಿಕರ ಸುರಕ್ಷತಾ ಕ್ರಮಗಳು, ಪೊಲೀಸ್ ಬಂದೋಬಸ್ತ್, ಆಂಬ್ಯುಲೆನ್ಸ್ ವ್ಯವಸ್ಥೆ, ಕುಡಿಯುವ ನೀರು, ಆಶ್ರಯ ಮತ್ತು ಆಹಾರದ ವ್ಯವಸ್ಥೆಗಳ ಬಗ್ಗೆಯೂ ಪರಿಶೀಲನೆ ನಡೆಯಲಿದೆ.
ಕಾರ್ಯಕ್ರಮದ ಸಂಪೂರ್ಣತೆಯನ್ನು ದಾಖಲಿಸಲು ವಿಡಿಯೋ ಚಿತ್ರೀಕರಣದ ವ್ಯವಸ್ಥೆ ಇದೆಯೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ.

ಸರ್ಕಾರದ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ 18 ಷರತ್ತುಗಳನ್ನು ಆಯೋಜಕರು ಪಾಲಿಸಿರುವರೇ ಎಂಬುದನ್ನು ಸಮಿತಿ ಖಚಿತಪಡಿಸಿಕೊಳ್ಳಲಿದೆ. ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳ ಪಾಲನೆಯ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ, ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಕುರಿತು ಸ್ಪಷ್ಟ ಕಾರಣಗಳೊಂದಿಗೆ ಶಿಫಾರಸು ಸಲ್ಲಿಸುವ ಜವಾಬ್ದಾರಿ ಸಮಿತಿಯದ್ದಾಗಿದೆ.

ಸಾಂಪ್ರದಾಯಿಕ ಕ್ರೀಡೆಗಳ ಆಯೋಜನೆಗೆ ಅವಕಾಶ ನೀಡುವುದರ ಜೊತೆಗೆ, ಪಾಲ್ಗೊಳ್ಳುವ ಎತ್ತುಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ.