ನಗರದ ಯಳ್ಳೂರ ರಸ್ತೆಯಲ್ಲಿನ ಕೆಎಲ್‌ಇ ಸೆಂಟೆನರಿ ಚಾರಿಟಬಲ್ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಆಸ್ಪತ್ರೆಯಲ್ಲಿ ಸಿಬ್ಬಂದಿಗಾಗಿ ಉಚಿತ ‘ಹೆಪಟೈಟಿಸ್-ಬಿ’ ಲಸಿಕೆ ಅಭಿಯಾನ ಜರುಗಿತು. ಡಾ.ಸಂಜಯ ಕಂಬಾರ, ಡಾ.ರಿಕಿ ಪಾಟೀಲ, ಪ್ರಭಾವತಿ ಪಾಟೀಲ, ಭಾರತಿ ಇತರರಿದ್ದರು.
ಬೆಳಗಾವಿ: ಕೆಎಲ್‌ಇ ಸಂಸ್ಥೆಯು ಸಮಾಜಕ್ಕೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಜತೆಗೆ, ತನ್ನ ಸಿಬ್ಬಂದಿ ಯೋಗಕ್ಷೇಮಕ್ಕೂ ಬದ್ಧವಾಗಿದೆ ಎಂಬುದಕ್ಕೆ ಉಚಿತ ಲಸಿಕಾ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಕೆಎಲ್‌ಇ ಸೆಂಟೆನರಿ ಚಾರಿಟಬಲ್ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಹೇಳಿದರು.
ಇಲ್ಲಿನ ಯಳ್ಳೂರ ರಸ್ತೆಯ ಕೆಎಲ್‌ಇ ಸೆಂಟೆನರಿ ಚಾರಿಟಬಲ್ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಆಸ್ಪತ್ರೆಯ ಸಿಬ್ಬಂದಿಗಾಗಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ‘ಹೆಪಟೈಟಿಸ್-ಬಿ’ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈದ್ಯರು, ಶುಶ್ರೂಷಕರು (ನರ್ಸ್‌ಗಳು), ವಾರ್ಡ್ ಬಾಯ್‌ಗಳು, ಭದ್ರತಾ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರು ದಿನನಿತ್ಯ ರೋಗಿಗಳೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ. ಚಿಕಿತ್ಸೆ ನೀಡುವಾಗ ಅಥವಾ ಕರ್ತವ್ಯದ ಸಮಯದಲ್ಲಿ ರಕ್ತ ಹಾಗೂ ಇತರ ದ್ರವಗಳ ಮೂಲಕ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಹೆಪಟೈಟಿಸ್-ಬಿ ಒಂದು
ಗಂಭೀರವಾದ ಯಕೃತ್ತಿನ ಕಾಯಿಲೆಯಾಗಿದ್ದು, ಇದನ್ನು ತಡೆಗಟ್ಟಲು ಆಸ್ಪತ್ರೆ ಆಡಳಿತ ಮಂಡಳಿ ಲಸಿಕೆಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದರು.
ಡಾ.ರಿಕಿ ಪಾಟೀಲ, ಸಂತೋಷ ಇತಾಪೆ, ಪ್ರಭಾವತಿ ಪಾಟೀಲ, ಭಾರತಿ ಇತರರಿದ್ದರು.