ಬೆಳಗಾವಿಯಲ್ಲಿ ಶನಿವಾರ ಜರುಗಿದ ಕೃತಿ ಬಿಡುಗಡೆ ಸಮಾರಂಭದಲ್ಲಿ ವಿಜಯಕುಮಾರ ನೆರ್ಲೇಕರ, ಮಧುಕರ ಗುಂಡೇನಟ್ಟಿ, ಡಾ.ಅಡಿವೆಪ್ಪ ಇಟಗಿ, ಪ್ರೊ.ಜಿ.ಕೆ.ಕುಲಕರ್ಣಿ, ನವಲೂರ ತಾನಾಜಿ ಇತರರು ಇದ್ದರು. 
ಬೆಳಗಾವಿ

ಹಾಸ್ಯ ಬರವಣಿಗೆ ಬಹಳ ಕಷ್ಟಕರ

ಶಂಕರ ಗೆಜ್ಜಿ
ಹಾಸ್ಯ ಬರವಣಿಗೆ ಬಹಳ ಕಷ್ಟಕರ
ಬೆಳಗಾವಿ: ಹಾಸ್ಯ ಭಾಷಣಕ್ಕಿಂತ, ಹಾಸ್ಯ ಬರವಣಿಗೆ ತುಂಬ ಕಷ್ಟ. ಆಂಗಿಕ ಮಾತು, ಹಾವಭಾವದ ಪ್ರಸಂಗಗಳಿಂದ ಪ್ರೇಕ್ಷಕರನ್ನು ರಂಜಿಸಬಹುದು. ಆದರೆ, ಬರವಣಿಗೆ ಮೂಲಕ ಜನರನ್ನು ನಗಿಸುವುದು ತುಂಬ ಕಷ್ಟದ ಕೆಲಸ ಎಂದು ಲೇಖಕ ವಿಜಯಕುಮಾರ ನೆರ್ಲೇಕರ ಅಭಿಪ್ರಾಯಪಟ್ಟರು.
ಹಾಸ್ಯಕೂಟ ಬಳಗ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ತಮ್ಮ ರಚನೆಯ ‘ನೋಟಿನ್ಯಾಗ ನಗೆಯ ಬೀರಿ’ ಕೃತಿ ಬಿಡುಗಡೆ ಮತ್ತು ಹೊಸ ವರುಷ ಹಳೇ ನಗೆನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಸ್ಯದಿಂದ ದೂರವಿದ್ದ ನನ್ನನ್ನು ಹತ್ತಿರ ತರಲು ಈ ಕೃತಿ ಹೊರಬರಲು ಹಾಸ್ಯಕೂಟಗಳು ಕಾರಣ ಎಂದರು.
ಡಾ.ಅಡಿವೆಪ್ಪ ಇಟಗಿ ಕೃತಿ ಪರಿಚಯಿಸಿ ಮಾತನಾಡಿ, ಗ್ರಾಮೀಣ ಭಾಗದ ಮುಗ್ಧ ಜನರ ಬದುಕು, ಅವರ ಮನಸ್ಸು, ಮಾನವೀಯ ಮಿಡಿತಗಳನ್ನು ಲೇಖಕರು ತಮ್ಮ ಬರವಣಿಗೆ ವಸ್ತುಗಳಾಗಿಸಿಕೊಂಡಿದ್ದಾರೆ. ಇಲ್ಲಿನ ಬರಹ ಓದುಗರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ ಎಂದರು.
ಸಾಹಿತಿ ಗುಂಡೇನಟ್ಟಿ ಮಧುಕರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಹಾಸ್ಯ ಹಾಗೂ ಹಾಸ್ಯ ಲೇಖಕರೆಂದರೆ ತುಂಬ ಪ್ರೀತಿ, ಅಭಿಮಾನ. ಈ ಕೃತಿಯನ್ನು ಹಾಸ್ಯ ಸಾಹಿತ್ಯ ಲೋಕಕ್ಕೆ ನೀಡುವುದರ ಮೂಲಕ ನಗೆಬರೆಹಗಾರರ ಮತ್ತೊಂದು ಸಂಖ್ಯೆಯನ್ನು ಹೆಚ್ಚಿಸಿದಂತಾಗಿದೆ ಎಂದರು.
ಕೃತಿಯ ಲೇಖಕ ವಿಜಯಕುಮಾರ ನೆರ್ಲೇಕರ ಅವರನ್ನು ಸನ್ಮಾನಿಸಲಾಯಿತು. ನಗೆ ಮಾತುಗಾರ ಪ್ರೊ.ಜಿ.ಕೆ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನವಲೂರ ತಾನಾಜಿ, ಭರತೇಶ ಪಾರೀಸ ಹಿತ್ತಲಕೇರಿ, ನಿರಾಕಾರಿ, ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಗೌರವ ಕಾರ್ಯದರ್ಶಿ ಆರ್.ಬಿ. ಕಟ್ಟಿ, ಅರವಿಂದ ಹುನಗುಂದ, ಎಂ.ಬಿ.ಹೊಸಳ್ಳಿ, ಡಾ.ಕೆ.ಡಿ.ದೇಶಪಾಂಡೆ, ಮದನ ಕಣಬೂರ, ಎಂ.ಎಫ್.ಸುಬ್ಬಾಪುರಮಠ, ವ್ಯಾಸಾಚಾರ್ಯ ಅಂಬೇಕರ, ಬಸವರಾಜ ಪಟ್ಟಣಶೆಟ್ಟಿ, ತವನಪ್ಪ ದೇಸಾಯಿ, ಜಿ.ಎಸ್.ಸೋನಾರ ಇತರರಿದ್ದರು.