ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೊಂದಿಗೆ ಶಾಸಕ ವಿಶ್ವಾಸ ವೈದ್ಯ ಚರ್ಚಿಸಿದರು. 
ಬೆಳಗಾವಿ

ಸವದತ್ತಿಗೆ ಪ್ರತ್ಯೇಕ ಹೆಸ್ಕಾಂ ವಿಭಾಗಕ್ಕೆ ಸಿಎಂ ಒಪ್ಪಿಗೆ

ಮಂಜುನಾಥ ಕೋಳಿಗುಡ್ಡ
ಬೆಳಗಾವಿ : ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಪ್ರತ್ಯೇಕ ಹೆಸ್ಕಾಂ ವಿಭಾಗ ರಚನೆಗೆ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾದ ಶಾಸಕ ವಿಶ್ವಾಸ ವೈದ್ಯ, ಬೈಲಹೊಂಗಲ ಹೆಸ್ಕಾಂ ವಿಭಾಗದಿಂದ ಸವದತ್ತಿ ಉಪವಿಭಾಗವನ್ನು ಪ್ರತ್ಯೇಕಿಸಿ ಸ್ವತಂತ್ರ ಹೆಸ್ಕಾಂ ವಿಭಾಗ ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.
ಸವದತ್ತಿ ಉಪವಿಭಾಗವು ಸವದತ್ತಿ ಮತ್ತು ಯರಗಟ್ಟಿ ತಾಲೂಕುಗಳ ವ್ಯಾಪ್ತಿಯಲ್ಲಿ 131 ಗ್ರಾಮಗಳು, 45 ಗ್ರಾಮ ಪಂಚಾಯಿತಿಗಳು, ಒಂದು ನಗರಸಭೆ, ಒಂದು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಯನ್ನು ಒಳಗೊಂಡಿರುವ ವಿಶಾಲ ಪ್ರದೇಶವಾಗಿದೆ. ಇಲ್ಲಿ 1.29 ಲಕ್ಷಕ್ಕೂ ಅಧಿಕ ವಿದ್ಯುತ ಸಂಪರ್ಕಗಳು, 102 ಎಚ್‌ಟಿ ಸ್ಥಾವರಗಳು, 16 ವಿದ್ಯುತ ವಿತರಣಾ ಕೇಂದ್ರಗಳು ಹಾಗೂ 10,055 ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ.
ಆದರೆ, ವಿದ್ಯುತ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಹಕರು 70 ಕಿಲೋಮೀಟರ ದೂರದ ಹುಬ್ಬಳ್ಳಿ ಕಚೇರಿ ಇಲ್ಲವೇ 40 ಕಿಲೋಮೀಟರ್ ದೂರದ ಬೈಲಹೊಂಗಲ ವಿಭಾಗೀಯ ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಗ್ರಾಹಕರಿಗೆ ತ್ವರಿತ ಸೇವೆ ಒದಗಿಸಲು ಹಾಗೂ ನಿರಂತರ ವಿದ್ಯುತ ಪೂರೈಕೆಯನ್ನು ಖಚಿತಪಡಿಸಲು ಸವದತ್ತಿಯಲ್ಲಿ ಪ್ರತ್ಯೇಕ ಹೆಸ್ಕಾಂ ವಿಭಾಗ ಅಗತ್ಯವಾಗಿದೆ ಎಂದು ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಮನವಿಗೆ ತಕ್ಷಣ ಸ್ಪಂದಿಸಿದ ಡಿ.ಕೆ. ಶಿವಕುಮಾರ, ಈ ಪ್ರಸ್ತಾವನೆಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಸವದತ್ತಿಯಲ್ಲಿ ಹೊಸ ಹೆಸ್ಕಾಂ ವಿಭಾಗ ರಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದರು ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದ್ದಾರೆ.