ಇಲ್ಲಿನ ಮಹಾನಗರ ಪಾಲಿಕೆ ಕಂದಾಯ ವಿಭಾಗದಲ್ಲಿ ನಾಗರಿಕರ ಆಸ್ತಿಗಳ ಸಂಬಂಧಿತ ಪ್ರಮುಖ ದಾಖಲೆಗಳು ನಾಪತ್ತೆಯಾಗಿರುವುದು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಆಸ್ತಿ ತೆರಿಗೆ, ಖಾತೆ ಬದಲಾವಣೆ, ಮಾಲೀಕತ್ವ ದೃಢೀಕರಣ, ಖರೀದಿ ಪತ್ರಗಳು ಸೇರಿ ಮಹತ್ವ ದಾಖಲೆಗಳು ಲಭ್ಯವಿಲ್ಲದಿರುವುದು ಜನರು ನಿತ್ಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು. ಪಾಲಿಕೆ ಕಂದಾಯ, ಯೋಜನಾ ವಿಭಾಗದ ಅಧಿಕಾರಿಗಳ ಮಾಹಿತಿ ಪ್ರಕಾರ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ 1.55 ಲಕ್ಷ ಆಸ್ತಿಗಗಳಿವೆ. ತೆರಿಗೆ ವ್ಯಾಪ್ತಿಗೆ ಬಾರದಿರುವ ಅಂದಾಜು 2 ಸಾವಿರಕ್ಕೂ ಅಧಿಕ ಆಸ್ತಿಗಳಿಗೆ. ಇವುಗಳಲ್ಲಿ ಬಹುತೇಕ ಆಸ್ತಿ ಮಾಲೀಕರು ನಿವೇಶನ, ಮನೆ ಖರೀದಿಸಿ 5 ರಿಂದ 6 ವರ್ಷ ಕಳೆದರು ತೆರಿಗೆ ಕಟ್ಟಿಲ್ಲ. ಖರೀದಿ ಪತ್ರ ಸಲ್ಲಿಕೆ ಮಾಡಿಲ್ಲ. ಕೆಲ ಆಸ್ತಿಗಳ ದಾಖಲೆಗಳ ನಿರ್ವಹಣೆ ಮಾಡದಿರುವ ಹಿನ್ನೆಲೆ ಹಾಳಾಗಿ ಹೋಗಿವೆ. ಹಳೆ ಬೆಳಗಾವಿ ಸೇರಿ ವಿವಿಧ ವಾರ್ಡ್‌ಗಳಲ್ಲಿ ಆಸ್ತಿಗಳಿಗೆ ಮೂಲ ದಾಖಲೆ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ.
ಕಳೆದ ನಾಲ್ಕೈದು ತಿಂಗಳಿಂದ ಸಾರ್ವಜನಿಕರು ತಮ್ಮ ಆಸ್ತಿಗೆ ಇ-ಸ್ವತ್ತು ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ದಾಖಲೆಗಳ ಸಮಸ್ಯೆ, ಹೆಸರು ನೋಂದಣಿ ಆಗದಿರುವ, ಮಹತ್ವ ದಾಖಲೆಗಳು ಸಿಗದಿರುವ ಹಿನ್ನೆಲೆ ಆಸ್ತಿಗಳಿಗೆ ಇ-ಸ್ವತ್ತು ಆಗುತ್ತಿಲ್ಲ. ಕಂದಾಯ ವಿಭಾಗದ ಕಚೇರಿಗಳಲ್ಲಿ ಅಂದಾಜು 250ಕ್ಕೂ ಅಧಿಕ ಆಸ್ತಿಗಳ ದಾಖಲೆಗಳಿಲ್ಲ ಎಂಬ ಒಂದೇ ಉತ್ತರ ಕೇಳಿಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡದೆ ಕೈಕಟ್ಟಿ ಕುಳಿತಿದ್ದಾರೆ.ಹಲವು ವರ್ಷಗಳ ಹಿಂದಿನ ಆಸ್ತಿ ದಾಖಲೆಗಳು, ಫೈಲ್‌ಗಳು ಹಾಗೂ ರಿಜಿಸ್ಟರ್‌ಗಳು ನಾಪತ್ತೆಯಾಗಿರುವುದರಿಂದ ಆಸ್ತಿ ಸಂಬಂಧಿತ ವ್ಯವಹಾರಗಳು ಸಂಪೂರ್ಣ ಸ್ಥಗಿತಗೊಂಡಿವೆ.ಈ ಸಮಸ್ಯೆಯಿಂದಾಗಿ ಮನೆ ನಿರ್ಮಾಣ ಅನುಮತಿ, ಖಾತೆ ಪ್ರಮಾಣಪತ್ರ, ಆಸ್ತಿ ತೆರಿಗೆ ಪಾವತಿ, ಸಾಲಕ್ಕೆ ಅಗತ್ಯ ದಾಖಲೆಗಳನ್ನು ಪಡೆಯಲು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಯಾವುದೇ ಫಲಿತಾಂಶ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ದಾಖಲೆಗಳ ನಾಪತ್ತೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೇ? ಅಥವಾ ಉದ್ದೇಶಪೂರ್ವಕ ಅಕ್ರಮಗಳೇ ನಡೆಯುತ್ತಿವೆಯೇ? ಈ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ನಾಪತ್ತೆಯಾದ ದಾಖಲೆಗಳನ್ನು ಪತ್ತೆಹಚ್ಚಿ, ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
ನಾಗರಿಕರ ಆಸ್ತಿಗಳ ಸಂಬಂಧಿತ ಪ್ರಮುಖ ದಾಖಲೆಗಳು ನಾಪತ್ತೆಯಾಗಿರುವ ವಿಷಯ ನನ್ನ ಗಮನಕ್ಕೆ ಬಂಧಿಲ್ಲ. ಎಲ್ಲ ಆಸ್ತಿಗಳ ದಾಖಲೆಗಳ ನಿರ್ವಹಣೆ, ಸಂರಕ್ಷಣೆ ಮಾಡಿರುವ ಕುರಿತು ಪರಿಶೀಲನೆಗೆ ಸೂಚಿಸುತ್ತೇನೆ.
- ಎಂ.ಕಾರ್ತಿಕ್, ಪಾಲಿಕೆ ಆಯುಕ್ತ