ಬೆಳಗಾವಿ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ಸಿಟೀಸ್-2.0 ಯೋಜನೆ ಕುರಿತು ಸಭೆ ಜರುಗಿತು. ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಕಾರ್ತಿಕ್ ಎಂ, ಕವಿತಾ ವಾರಂಗಲ್, ಹಣಮಂತ ಕೊಂಗಾಲಿ ಇತರರಿದ್ದರು.
ಬೆಳಗಾವಿ :ಇಲ್ಲಿನ ಮಹಾನಗರದಲ್ಲಿ ಕೇಂದ್ರದ ವಿನೂತನ ಸಿಟೀಸ್-2.0 ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆಗೆ ನಿರಾಕರಿಸಿರುವುದು ಪಾಲಿಕೆ ಆಡಳಿತರೂಢ, ಪ್ರತಿಪಕ್ಷದ ಸದಸ್ಯರು ಕೆರಳುವಂತೆ ಮಾಡಿದೆ.
ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನವೀನತೆ, ಏಕೀಕರಣ ಮತ್ತು ಸ್ಥಿರತೆಯತ್ತ ಹೂಡಿಕೆ ( ಸಿಟೀಸ್-2.0) ಯೋಜನೆ ಅನುದಾನ ಹಂಚಿಕೆ ಗೊಂದಲ ಕುರಿತು ಸದಸ್ಯರು ಸಮಗ್ರವಾಗಿ ಚರ್ಚಿಸಿ ರಾಜ್ಯ ಸರ್ಕಾರಕ್ಕೆ ಎರಡನೇ ಬಾರಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದರು.
ಸಿಟೀಸ್-2.0 ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ.40ರಷ್ಟು ಹಾಗೂ ಮಹಾನಗರ ಪಾಲಿಕೆ ಶೇ.20ರಷ್ಟು ಅನುದಾ ನೀಡಬೇಕು. ಇದೀಗ ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ 75 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಾದರೆ ಬೆಳಗಾವಿ ಮಹಾನಗರ ಪಾಲಿಕೆ, ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ತನ್ನ ಪಾಲಿನ 18 ಕೋಟಿ ರೂ. ಬಿಡುಗಡೆ ಮಾಡಬೇಕು. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.40ರಷ್ಟು ಅನುದಾನ ನೀಡಲು ನಿರಾಕರಿಸಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.
ಈಗಾಗಲೇ ಸಿಟೀಸ್-2.0 ಯೋಜನೆಗೆ ಆಯ್ಕೆ ಸಂದರ್ಭದಲ್ಲಿ ಅನುದಾನ ಹಂಚಿಕೆ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ.ಅದರಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.40ರಷ್ಟು ಅನುದಾನ ನೀಡಬೇಕು.ಆದರೆ, ಸರ್ಕಾರವು ನಮ್ಮಿಂದ ಅನುದಾನ ಬಿಡುಗಡೆ ನೀರಾಕರಿಸಿದೆ. ಅಲ್ಲದೆ ನಮ್ಮ ತೆರಿಗೆ ಆದಾಯದಲ್ಲಿಯೇ 18 ಕೋಟಿ ರೂ. ಅನುದಾನ ಭರಿಸುವಂತೆ ಹೇಳುತ್ತಿದೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರು ಒತ್ತಡ ಹಾಕಬೇಕು
ಮಹಾನಗರದಲ್ಲಿ ಹಸಿ ಮತ್ತು ಒಣ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು, ಕಸ ಮರ ಬಳಕೆ ಮಾಡಿಕೊಂಡು ಆದಾಯ ವೃದ್ಧಿಸಿಕೊಳ್ಳುವ ಸಿಟೀಸ್-2.0 ಯೋಜನೆ ಮಹತ್ವದ ಪಾತ್ರ ವಹಿಸಲಿದೆ. ಅನುದಾನ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ,ಶಾಸಕ ಆಸೀಪ್ ಸೇಠ್ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸದಸ್ಯರ ವಿನಂತಿಸಿದರು.
ಪಾಲಿಕೆ ಆಡಳಿತರೂಢ ಪಕ್ಷದ ನಾಯಕ ಹಣಮಂತ ಕೊಂಗಾಲಿ, ಸ್ಮಾರ್ಟ್ ಸಿಟಿ ಎಂ.ಡಿ. ಕವಿತಾ ವಾರಂಗಲ್ ಇತರರಿದ್ದರು.
.................................
ಕೇಂದ್ರದ ಸಿಟೀಸ್-2.0 ಯೋಜನೆ ಅನುದಾನ ವಿಷಯವಾಗಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಲು ನಿರ್ಧರಿಸಲಾಗಿದೆ. ಇದೇ ವಿಷಯವಾಗಿ ಸರ್ಕಾರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಲಾಗುವುದು.
-ಕಾರ್ತಿಕ್.ಎಂ, ಪಾಲಿಕೆ ಆಯುಕ್ತ