ಚಿಂಚಣಿ ಮಠದಲ್ಲಿ ಹಮ್ಮಿಕೊಂಡಿದ್ದ ಸಿದ್ಧಪ್ರಭು, ಅಲ್ಲಮಪ್ರಭು ಸ್ಮರಣೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಡಾ.ಶಿವಲಿಂಗೇಶ್ವರ ಸ್ವಾಮೀಜಿ, ಸಂಪಾದನಾ ಸ್ವಾಮೀಜಿ, ಶಿವಪ್ರಸಾದ ದೇವರು, ಮಹಾಂತೇಶ ಕವಟಗಿಮಠ, ಪೃಥ್ವಿ ಕತ್ತಿ ಇತರರಿದ್ದರು.
- ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಅಭಿಪ್ರಾಯ
- ಕನ್ನಡ ರಾಜ್ಯೋತ್ಸವ
ಚಿಕ್ಕೋಡಿ: ಅಧ್ಯಾತ್ಮ, ಕನ್ನಡ ನಾಡು ನುಡಿಗೆ ಚಿಂಚಣಿ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠ ನೀಡಿದ ಸೇವೆ ಅನುಪಮ ಎಂದು ವಿಧಾನ ಪರಿಷತ್ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ತಾಲೂಕಿನ ಚಿಂಚಣಿ ಕನ್ನಡಮಠ ಎಂದೇ ಗುರುತಿಸುವ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿದ್ಧಪ್ರಭು ಹಾಗೂ ಅಲ್ಲಮಪ್ರಭು ಸ್ಮರಣೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ನಾಡು, ನುಡಿ ಉಳಿವು ಅಳಿವಿನ ಪ್ರಶ್ನೆ ಬಂದಾಗ ಚಿಂಚಣಿ ಮಠ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಾ ಬಂದಿದೆ. ಚಿಂಚಣಿ ಮಠದ ಲಿಂ.ಅಲ್ಲಮಪ್ರಭು ಸ್ವಾಮೀಜಿ ಶ್ರೀಮಠದಿಂದ ಕನ್ನಡ ನಾಡು-ನುಡಿ ಬಗ್ಗೆ ಬರೆದಿರುವ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಸಾಹಿತಿಗಳಿಗೆ ಉತ್ತೇಜನ ನೀಡಿದೆ. ಚಿಂಚಣಿ ಮಠ ಕನ್ನಡ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು-ನುಡಿ ಸೇವೆ ಜತೆಗೆ ಶ್ರೀಮಠ ಕೃಷಿ ಪ್ರಧಾನವಾಗಿತ್ತು. ಲಿಂ.ಸಿದ್ಧಪ್ರಭು ಸ್ವಾಮೀಜಿ ಪೀಠಾಧಿಕಾರಿಗಳಿದ್ದ ಸಂದರ್ಭದಲ್ಲಿ ಅವರೇ ಸ್ವತಃ ಕೃಷಿ ಮಾಡುತ್ತಿದ್ದರು. ಲಿಂ.ಅಲ್ಲಮಪ್ರಭು ಸ್ವಾಮೀಜಿ ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸಿದ್ದಾರೆ ಎಂದರು.
ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಜಗದ್ಗುರು ಡಾ.ಶಿವಲಿಂಗೇಶ್ವರ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಖಡಕಲಾಟ ಕುಮಾರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಚಿಂಚಣಿ ಮಠದ ಉತ್ತರಾಧಿಕಾರಿ ಶಿವಪ್ರಸಾದ ದೇವರು, ಸಾಹಿತಿ ಪ್ರಕಾಶ ಗಿರಿಮಲ್ಲನವರ, ಮಿಥುನ ಅಂಕಲಿ ಮಾತನಾಡಿದರು.
ಲಿಂ.ಸಿದ್ಧಪ್ರಭು, ಲಿಂ.ಅಲ್ಲಮಪ್ರಭು ಹಾಗೂ ಕನ್ನಡ ರಾಜರಾಜೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಯಿತು. ಹನುಮಂತ ನಾಯಿಕ ವಿರಚಿತ ವಚನ ಸಿಂಚನ ಗ್ರಂಥ ಲೋಕಾರ್ಪಣೆ ಮಾಡಲಾಯಿತು. ಪೃಥ್ವಿ ಕತ್ತಿ, ಲಕ್ಷ್ಮಣ ಢಂಗೇರ, ಬಸವರಾಜ ಪಾಟೀಲ, ಮಲ್ಲಿಕಾರ್ಜುನ ಕವಟಗಿಮಠ, ರಿಷಬ್ ಪಾಟೀಲ, ರಾಕೇಶ ಚಿಂಚಣೆ ಇತರರಿದ್ದರು.