ಬೆಳಗಾವಿ ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಅವರಣದ ಸಭಾಂಗಣದಲ್ಲಿ ಗುರುವಾರ ಕಾರ್ಯಾಗಾರವನ್ನು ಮೊಹಮ್ಮದ ರೋಷನ್ ಉದ್ಘಾಟಿಸಿದರು. ನಾಗರಾಜ್ ಕೆ.ಬಿ.,ನಿರಂಜನ್, ಸಿ.ಪಿ.ಆಯ್, ನೇತ್ರಾವತಿ ಪಾಟೀಲ ಇತರರಿದ್ದರು. 
ಬೆಳಗಾವಿ

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಗತ್ಯ

ಮಂಜುನಾಥ ಕೋಳಿಗುಡ್ಡ
ಬೆಳಗಾವಿ:ಬಾಲ ಕಾರ್ಮಿಕ ಪದ್ಧತಿ ಎಂಬ ಸಾಮಾಜಿಕ ಪಿಡುಗನ್ನು ತೊರೆದು ಹಾಕುವುದು ಅಗತ್ಯವಾಗಿದೆ. ಬಾಲ ಕಾರ್ಮಿಕರ ಕುರಿತು ಮಾತನಾಡುವುದು ಸುಲಭವಾಗಿದ್ದು ಇದನ್ನು ತಡೆಗಟ್ಟಲು ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಅವರಣದ ಸಭಾಂಗಣದಲ್ಲಿ ಗುರುವಾರ ಜರುಗಿದ ಕೃಷಿ ಕ್ಷೇತ್ರದ ಕಬ್ಬು ಕಟಾವು ಕಾರ್ಯದಲ್ಲಿ ಮಕ್ಕಳ ಬಳಕೆ ನಿಷೇಧಿಸಿ ಸಕ್ಕರೆ ಉತ್ಪಾದಕರಿಗೆ ಆಗುವ ಸವಲತ್ತುಗಳ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಕ್ಕರೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಕಂಪನಿಗಳಿಗೆ ಅವಶ್ಯಕವಾದ ಪ್ರಮುಖ ಕಚ್ಚಾ ವಸ್ತುವಾಗಿದೆ. ಆದರೆ ಕಂಪನಿಗಳಿಗೆ ಅಗತ್ಯವಿರುವ ವಸ್ತುವಿನ ಉತ್ಪಾದನೆ ಅಥವಾ ಉತ್ಪಾದನಾ ಸರಪಳಿಯ ಯಾವುದೇ ಹಂತದಲ್ಲಿ ಮಕ್ಕಳನ್ನು ಬಳಸಿಕೊಂಡು ಉತ್ಪಾದನೆ ಮಾಡಲಾಗಿದ್ದರೆ, ಅಂತಹ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕಂಪನಿಗಳು ಹಿಂದೇಟು ಹಾಕುತ್ತವೆ ಎಂದರು.
ರಾಜ್ಯದಲ್ಲಿ ವಿದೇಶಿ ಕಂಪನಿಗಳಾದ ನೆಸ್‌ಕೆಫೆ, ಕೊಕೊಕೊಲಾ, ಮಿಲ್ಕಿ ಬಾರ್ ಸೇರಿದಂತೆ ಉದ್ಯೋಗಾವಕಾಶ ಕಲ್ಪಿಸುವ ಹಲವು ಕಂಪನಿಗಳು ಸಕ್ಕರೆ ಆಮದು-ರಫ್ತು ವ್ಯವಹಾರಕ್ಕೆ ಸಹಕಾರ ನೀಡಲು ಐ.ಎಲ್.ಒ ಮೂಲಕ ಮುಂದಾಗುತ್ತಿರುವುದು ರಾಜ್ಯ ಹಾಗೂ ಬೆಳಗಾವಿ ಜಿಲ್ಲೆಗೆ ಉತ್ತಮ ಬೆಳವಣಿಗೆಯಾಗಿದೆ.
ಸಹಾಯಕ ಕಾರ್ಮಿಕ ಆಯುಕ್ತ ನಾಗರಾಜ್ ಕೆ.ಬಿ. ಮಾತನಾಡಿ, ಸರ್ಕಾರ, ಕಾರ್ಮಿಕರು ಹಾಗೂ ಉದ್ಯಮಿಗಳು ಒಟ್ಟಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಗೆ ಐ.ಎಲ್.ಒ ಸಹಕಾರ ನೀಡುತ್ತಿದೆ. ಬಾಲ ಕಾರ್ಮಿಕ ಮುಕ್ತ ವ್ಯವಸ್ಥೆ ನಿರ್ಮಾಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಉಪ ಪೋಲಿಸ್ ಅಧೀಕ್ಷಕ ನಿರಂಜನ್, ಸಿ.ಪಿ.ಆಯ್, ನೇತ್ರಾವತಿ ಪಾಟೀಲ, ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ್ ಡಿ.ಜಿ. ಇತರರಿದ್ದರು.