ಬೆಳಗಾವಿ ನಗರದ ಸುವರ್ಣ ವಿಧಾನಸೌಧದ ಕೇಂದ್ರ ಸಭಾಂಗಣದಲ್ಲಿ ಮಂಗಳವಾರ ಮತದಾರರ ಪಟ್ಟಿಯ ಪರಿಷ್ಕರಣೆ ತರಬೇತಿ ಕಾರ್ಯಾಗಾರ ನಡೆಯಿತು. ವಿ. ರಾಘವೇಂದ್ರ, ಮೊಹಮ್ಮದ ರೋಷನ್, ವಿಜಯಕುಮಾರ ಹೊನಕೇರಿ, ಕಾರ್ತಿಕ್.ಎಂ ಇತರರಿದ್ದರು. 
ಬೆಳಗಾವಿ

ವಲಸೆ ಮತದಾರರನ್ನು ಪರಿಶೀಲಿಸಿ ಕ್ರಮ ವಹಿಸಿ

ಮಂಜುನಾಥ ಕೋಳಿಗುಡ್ಡ
ಬೆಳಗಾವಿ :ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಅನುಸಾರ ಪಾರದರ್ಶಕ ಹಾಗೂ ದೋಷರಹಿತ ರೀತಿಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯಬೇಕು ಎಂದು ಸಂಯುಕ್ತ ಮುಖ್ಯ ಚುನಾವಣಾಧಿಕಾರಿ ವಿ. ರಾಘವೇಂದ್ರ ಹೇಳಿದರು.
ನಗರದ ಸುವರ್ಣ ವಿಧಾನಸೌಧದ ಕೇಂದ್ರ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ( ಎಸ್‌ಐಆರ್)(ಖಐ್ಕ) ಕುರಿತ ವಿಭಾಗ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಚುನಾವಣಾ ನಿಯಮಗಳನ್ನು ಮರುಮರು ಉಲ್ಲಂಘಿಸಿದ ಕಾರಣ ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಉದಾಹರಣೆಗಳಿವೆ.ಚುನಾವಣಾ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ನಿರ್ವಹಿಸುವ ಅಗತ್ಯವಿದೆ.ಅರ್ಹ ಮತದಾರರ ಸೇರ್ಪಡೆ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಗೈರುಹಾಜರಿರುವ ಮತ್ತು ವಲಸೆ ಮತದಾರರ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿ,ಚುನಾವಣಾ ಆಯೋಗ ಹೊರಡಿಸಿರುವ ನಿಯಮಗಳು ಮತ್ತು ಮಾರ್ಗಸೂಚಿಗಳ ಅನುಸಾರವೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವನ್ನು ಕಟ್ಟುನಿಟ್ಟಾಗಿ ನಡೆಸಬೇಕು. ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಹು ನೋಂದಣಿಗಳ ಮ್ಯಾಪಿಂಗ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಆದರೆ ಇನ್ನೂ ಅನೇಕ ನಾಗರಿಕರು ಮ್ಯಾಪಿಂಗ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಉಳಿದಿರುವ ಮ್ಯಾಪಿಂಗ್ ಕಾರ್ಯವನ್ನು ತಕ್ಷಣ ಪೂರ್ಣಗೊಳಿಸಿ, ಕ್ಷೇತ್ರ ಸಮೀಕ್ಷೆಗಳ ಮೂಲಕ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಸೇರ್ಪಡೆಗೊಳಿಸುವಂತೆ ನಿರ್ದೇಶನ ನೀಡಿದರು.
ಯಾವುದೇ ಅರ್ಹ ನಾಗರಿಕನು ಮತದಾನದ ಹಕ್ಕಿನಿಂದ ವಂಚಿತನಾಗಬಾರದು. ಮತದಾನವು ಪ್ರತಿಯೊಬ್ಬ ನಾಗರಿಕನ ಪ್ರಜಾಪ್ರಭುತ್ವದ ಹಕ್ಕಾಗಿದ್ದು, ಈ ಹಕ್ಕು ಎಲ್ಲರಿಗೂ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು, ಎಂದು ಅವರು ಹೇಳಿದರು. ಜೊತೆಗೆ ಮತದಾರ ನೋಂದಣಿ ಅಧಿಕಾರಿಗಳು ಮತ್ತು ಸಹಾಯಕ ಮತದಾರ ನೋಂದಣಿ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಹಾಗೂ ತಪ್ಪಿಲ್ಲದೆ ನಿರ್ವಹಿಸಬೇಕು ಎಂದು ಸೂಚಿಸಿದರು.
ಕಾರ್ಯಾಗಾರದಲ್ಲಿ ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಮೃತ ಮತ್ತು ನಕಲಿ ಮತದಾರರ ಹೆಸರುಗಳ ಅಳಿವು ಹಾಗೂ ಆನ್‌ಲೈನ್ ಸೇವೆಗಳ ಬಳಕೆ ಸೇರಿದಂತೆ ಮತದಾರರ ಪಟ್ಟಿಯ ಪರಿಷ್ಕರಣೆಯ ವಿವಿಧ ಅಂಶಗಳ ಕುರಿತು ಅಧಿಕಾರಿಗಳಿಗೆ ವಿವರವಾದ ಮಾಹಿತಿ ನೀಡಲಾಯಿತು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ. ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಇತರರಿದ್ದರು.