ಐಐಟಿ ಹಾಗೂ ವಿವಿಧ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು
ಬೆಳಗಾವಿ: ಗ್ರಾಮೀಣ ಭಾಗದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳ ಬಾಗಿಲು ತೆರೆಯಬಹುದು ಎಂಬುದನ್ನು ಬೆಳಗಾವಿ ಜಿಲ್ಲಾ ಪಂಚಾಯತದ ಸಿಇಟಿ-ಸಕ್ಷಮ್ ಕಾರ್ಯಕ್ರಮ ಸಾಬೀತುಪಡಿಸಿದೆ.
ಜಿಲ್ಲಾ ಪಂಚಾಯತ ವತಿಯಿಂದ 2024-25ನೇ ಸಾಲಿನಿಂದ ಆರಂಭಿಸಲಾದ ಸಿಇಟಿ-ಸಕ್ಷಮ್ ತರಬೇತಿಯ ಮೂಲಕ ವಿವಿಧ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 8 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಜೆಇಇ ಹಾಗೂ ನೀಟ್ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ ಗಳಿಸಿ ಐಐಟಿ ಹಾಗೂ ವಿವಿಧ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.ಈ ಪೈಕಿ 6 ವಿದ್ಯಾರ್ಥಿನಿಯರು ವೈದ್ಯಕೀಯ ಶಿಕ್ಷಣಕ್ಕೆ ಹಾಗೂ ಇಬ್ಬರು ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಬೈಲಹೊಂಗಲ ಸರ್ಕಾರಿ ಪಿಯು ಕಾಲೇಜಿನ ಸೃಷ್ಠಿ ದಾಸರ ಹಾಗೂ ವರ್ಷಾ ಗಾಡದ ಅವರು ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿ ಕ್ರಮವಾಗಿ ಶಿವಮೊಗ್ಗ ಹಾಗೂ ಕಲಬುರಗಿ ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಲಕ್ಷ್ಮಿ ಬಡಿಗೇರ್ ಅವರು ಕಾರವಾರದ ಮೆಡಿಕಲ್ ಕಾಲೇಜಿಗೆ, ಪ್ರಿಯಾ ಮರಡಿ ಅವರು ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿಗೆ, ಪುಷ್ಪಾ ಒಬನ್ನವರ್ ಅವರು ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಹಾಗೂ ಕೀರ್ತಿ ಕರಿಕಟ್ಟಿ ಅವರು ಬೆಂಗಳೂರಿನ ಬಿ.ಎಂ.ಸಿ.ಆರ್.ಐ. ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಸಿಇಟಿ-ಸಕ್ಷಮ್ ತರಬೇತಿಯ ಮತ್ತೊಂದು ಪ್ರಮುಖ ಫಲವಾಗಿ ಮಜಲಟ್ಟಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪಾರ್ಥ ಅಕ್ಕೋಲೆ ಹಾಗೂ ಶ್ರೀಹಂತ ಬಂಗಾರಿ ಅವರು ಜೆಇಇ ಪರೀಕ್ಷೆಯಲ್ಲಿ ಸಾಧನೆ ಮಾಡಿ ಕ್ರಮವಾಗಿ ಜಾರ್ಖಂಡ್‌ನ ಧನಬಾದ್ ಐಐಟಿ ಹಾಗೂ ಒಡಿಶಾದ ರೋರ್ಕೆಲಾ ಐಐಟಿಗೆ ಪ್ರವೇಶ ಪಡೆದಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳ ಕೈಹಿಡಿದ ಸಿಇಟಿ-ಸಕ್ಷಮ್
ಆರ್ಥಿಕವಾಗಿ ದುರ್ಬಲವಾಗಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಿಇಟಿ, ಜೆಇಇ, ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಪೂರ್ವಸಿದ್ಧತೆ ಪಡೆಯಬೇಕು ಎಂಬ ಉದ್ದೇಶದಿಂದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ನೇತೃತ್ವದಲ್ಲಿ ಸಿಇಟಿ-ಸಕ್ಷಮ್ ಕಾರ್ಯಕ್ರಮ ರೂಪಿಸಲಾಯಿತು.ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಪರೀಕ್ಷೆಯ ಮಾದರಿಯಲ್ಲೇ ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಆಫ್‌ಲೈನ್ ಅಣಕು ಪರೀಕ್ಷೆಗಳನ್ನು ಓಎಂಆರ್ ಮಾದರಿಯಲ್ಲಿ ನಡೆಸಲಾಯಿತು. ಪರೀಕ್ಷೆಯ ಬಳಿಕ ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿಗಳ ಸಂದೇಹಗಳನ್ನು ನಿವಾರಿಸಲು ಆನ್‌ಲೈನ್ ಮೂಲಕ ವಿಶೇಷ ತರಗತಿಗಳನ್ನೂ ಆಯೋಜಿಸಲಾಯಿತು.
ಜಿಲ್ಲೆಯ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಮೆಡಿಕಲ್ ಹಾಗೂ ಐಐಟಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆದಿರುವುದಕ್ಕೆ ಅಭಿನಂದನೆ.ಬೈಲಹೊಂಗಲ ಹಾಗೂ ಮಜಲಟ್ಟಿ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿನಿಯರು ವಿವಿಧ ಮೆಡಿಕಲ್ ಕಾಲೇಜುಗಳಿಗೆ ಹಾಗೂ ಇಬ್ಬರು ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿ. ಸತತ ಪರಿಶ್ರಮ ಮತ್ತು ಶಿಸ್ತಿನಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಜಿಲ್ಲಾ ಪಂಚಾಯತದ ಸಿಇಟಿ-ಸಕ್ಷಮ್ ಕಾರ್ಯಕ್ರಮ ಮುಂದುವರಿಸಲಾಗುತ್ತಿದೆ ಎಂದು ಜಿಪಂ ಸಿಇಒ ರಾಹುಲ ಶಿಂಧೆ ತಿಳಿಸಿದ್ದಾರೆ.