ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯಲ್ಲಿ ಸತೀಶ ಜಾರಕಿಹೊಳಿ ಮಾತನಾಡಿದರು. ಮೊಹಮ್ಮದ ರೋಷನ್, ರಾಹುಲ ಶಿಂಧೆ, ಪ್ರಕಾಶ ನಿಕ್ಕಂ ಇತರರಿದ್ದರು.
ಬೆಳಗಾವಿ: ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ, ವೀರರಾಣಿ ಕಿತ್ತೂರು ಚನ್ನಮ್ಮ ಅವರ ವಿಜಯೋತ್ಸವದ ಸ್ಮರಣಾರ್ಥ ನಡೆಯುವ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಈ ಬಾರಿ ಮತ್ತೊಂದು ವಿಶೇಷ ಮೆರುಗು ಸಿಗಲಿದೆ. ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ‘ಜಾನುವಾರ ಮೇಳ’ಆಯೋಜಿಸಲಾಗುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯಲ್ಲಿ ಕಿತ್ತೂರು ಉತ್ಸವದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು, ದೇಶಿ ತಳಿಯ ಜಾನುವಾರಗಳನ್ನು ಪ್ರೋತ್ಸಾಹಿಸುವುದು, ಅವುಗಳ ಸಂರಕ್ಷಣೆ ಮತ್ತು ರೈತರಲ್ಲಿ ದೇಶಿ ತಳಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ ಜಾನುವಾರ ಮೇಳ ಆಯೋಜನೆ ಕುರಿತು ನಿರ್ಣಯ ಕೈಗೊಂಡರು.
ಅಕ್ಟೋಬರ 23, 24 ಹಾಗೂ 25ರಂದು ಮೂರು ದಿನಗಳ ಕಾಲ ನಡೆಯಲಿರುವ ಕಿತ್ತೂರು ಉತ್ಸವದಲ್ಲಿ ಜಾನುವಾರ ಮೇಳ ವಿಶೇಷ ಮೆರಗು ನೀಡಲಿದೆ. ಅಲ್ಲದೆ,ರಾಜ್ಯದ ಧಾರವಾಡ, ಬೆಳಗಾವಿ, ಕಲಬುರಗಿ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ರೈತರು ಹಾಗೂ ಜಾನುವಾರುಗಳು ಭಾಗವಹಿಸಲಿವೆ. ಅಲ್ಲದೆ,ರೈತರು ತಮ್ಮ ನೆಚ್ಚಿನ ದೇಶಿ ತಳಿಯ ಹಸು, ಎತ್ತು, ಎಮ್ಮೆಗಳನ್ನು ಪ್ರದರ್ಶಿಸುವುದರೊಂದಿಗೆ, ಉತ್ತಮ ತಳಿಗಳ ಕುರಿತು ಮಾಹಿತಿ ಪಡೆಯಲು ಹಾಗೂ ಇತರ ರೈತರೊಂದಿಗೆ ಅನುಭವ ಹಂಚಿಕೊಳ್ಳಲು ಮೇಳ ವೇದಿಕೆಯಾಗಲಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಈ ಬಾರಿ ಐತಿಹಾಸಿಕ ಕಿತ್ತೂರು ಉತ್ಸವದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಉತ್ಸವದ ವಿವಿಧ ವೇದಿಕೆಗಳಲ್ಲಿ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಯುವ ಕಲಾವಿದರಿಗೆ, ಸಾಹಿತಿಗಳು, ಕವಿಗಳನ್ನು, ಪ್ರಗತಿ ರೈತರು, ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಮಹಿಳೆಯರಿಗಾಗಿ ಒಂದು ದಿನ ಮಹಿಳಾ ದಿನ ಪ್ರತ್ಯೇಕವಾಗಿ ಮೀಸಲಿಡಲಾಗುವುದು. ವಿಚಾರ ಸಂಕಿರಣ, ಚರ್ಚಾ ಗೋಷ್ಠಿಗಳಿಗೆ ಹೊಸ ರೂಪ ಕಲ್ಪಿಸಲಾಗುವುದು. ಹೊಸ ವಿಷಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಅಕ್ಟೋಬರ್ 13ರಂದು ಕಿತ್ತೂರು ಉತ್ಸವ ಜ್ಯೋತಿ ಉದ್ಘಾಟನೆಯು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿಡಿ.ಕೆ.ಶಿವಕುಮಾರ ಮಾಡಲಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮನವರ ವಿಜಯೋತ್ಸವಕ್ಕೆ ವಿವಿಧ ರಿತಿಯ ಫಲ ಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ ನಡೆಸಲಾಗುವದು. ಉತ್ಸವ ಆಚರಣೆಗಾಗಿ 5 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಬಾಬಾಸಾಹೇಬ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಪಂ ಸಿಇಒ ರಾಹುಲ ಶಿಂಧೆ, ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ, ಎಸ್‌ಪಿ ಕೆ.ರಾಮರಾಜನ್ ಇತರರಿದ್ದರು.
..........................
ಕಿತ್ತೂರು ರಾಣಿ ಚನ್ನಮ್ಮನವರ ವಿಜಯೋತ್ಸವಕ್ಕೆ ಅನುದಾನ ಕೊರತೆ ಇಲ್ಲ.ಕಳೆದ ವರ್ಷದಿಂದ ಬರಬೇಕಾಗಿರುವ 30 ಲಕ್ಷ ರೂ. ಅನುದಾನ ಬಿಡುಗಡೆ ಕ್ರಮ ವಹಿಸಲಾಗಿದೆ. ಈ ಬಾರಿಯು 5 ಕೋಟಿ ರೂ. ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು.
- ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ