ಬೆಳಗಾವಿಯಲ್ಲಿ ಶುಕ್ರವಾರ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರೀತಿ ಕಾಮಕಾರ, ಗೀತಾ ಸುತಾರ, ಅನಿಲ ಬೆನಕೆ, ಸಂಜಯ ಪಾಟೀಲ ಇತರರಿದ್ದಾರೆ. 
ಬೆಳಗಾವಿ

ಜಾತಿಗಣತಿ ವರದಿ ಅಧಿವೇಶನದಲ್ಲಿ ಮಂಡಿಸಿ

ಡಿ.ವಿ. ಕಮ್ಮಾರ
ಬೆಳಗಾವಿ : ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ ನೇತೃತ್ವದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸರ್ಕಾರ ಅಧಿವೇಶನದಲ್ಲಿ ಮಂಡಿಸಿ ಚರ್ಚೆಗೆ ತರಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಒಬಿಸಿ ಮೋರ್ಚಾ ಪ್ರಮುಖರ ಸಭೆಗೂ ಮುಂಚೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಸುಮಾರು 6,00 ಕೋಟಿಯಷ್ಟು ಹಣ ಖರ್ಚು ಮಾಡಿದೆ. ಆದರೆ ಯಾವುದನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಈಗ ಸಲ್ಲಿಕೆಯಾಗಿರುವ ವರದಿಯನ್ನಾದರೂ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ಸಿಗಿರುವ ಬದ್ಧತೆಯ ಕೊರತೆಯಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ. 2014ರಲ್ಲಿ ಕಾಂತರಾಜ ಆಯೋಗಕ್ಕೆ ಜಾತಿ ಜನಗಣತಿ ಜವಾಬ್ದಾರಿ ಕೊಟ್ಟಿದ್ದರು. ಆನಂತರ ಜಯಪ್ರಕಾಶ ಹೆಗ್ಡೆ ಆಯೋಗಕ್ಕೆ ವಹಿಸಲಾಯಿತು. ಈ ವರದಿಯನ್ನೂ ಪಕ್ಕಕ್ಕೆ ಸರಿಸಿದ್ದರು. ಬಿಹಾರದಲ್ಲಿ ನಿತೀಶ ಕುಮಾರ, ತೆಲಂಗಾಣದಲ್ಲಿ ರೇವಂತ ರೆಡ್ಡಿ ಒಂದು ವರ್ಷದ ಕಾಲಮಿತಿಯಲ್ಲಿ ಮಾಡಿದ ಕೆಲಸವನ್ನು, ಇವರಿಗೆ ಹತ್ತು ವರ್ಷದಿಂದ ಮಾಡಲಾಗಿಲ್ಲ ಎಂದು ದೂರಿದರು.
ಕಳೆದ ವರ್ಷ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯಕ ನೇತೃತ್ವದಲ್ಲಿ ಮತ್ತೊಂದು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ದಾರೆ. ಈ ವರದಿಯನ್ನು ಸಿದ್ದರಾಮಯ್ಯ ರಾಜೀನಾಮೆಗೂ ಮುಂಚೆ ತರಾತುರಿಯಲ್ಲಿ ಸ್ವೀಕರಿಸಿದ್ದಾರೆ. ಆ ಬಳಿಕ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. ಈಗ ಆರಂಭಗೊಂಡಿರುವ ಕಾನೂನು ಹೋರಾಟದಲ್ಲೂ ಸರ್ಕಾರ ಸರಿಯಾದ ಸಿದ್ಧತೆ ಮಾಡದೆ ವಿಫಲವಾಗಿದೆ. ಹೊಸ ಮುಖ್ಯಮಂತ್ರಿ ಜಾತಿ ಜನಗಣತಿಯ ಬಗ್ಗೆ ಒಂದೇ ಒಂದು ಶಬ್ದ ಮಾತನಾಡುತ್ತಿಲ್ಲ. ಇದನ್ನು ಪ್ರಶ್ನಿಸಬೇಕಾದ ಕಾಂಗ್ರೆಸ್ಸಿನಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಮಂತ್ರಿ ಸ್ಥಾನದ ಚಿಂತೆಯಲ್ಲಿದ್ದಾರೆ. ಮತ ಬ್ಯಾಂಕ್ ರಾಜಕಾರಣಕ್ಕೆ ಜಾತಿ ಗಣತಿ ಹೆಸರು ಬಳಿಸಿಕೊಳ್ಳುತ್ತಿದ್ದಾರೆ. ಇವರಿಗೆ ನಿಜವಾದ ಬದ್ಧತೆ ಇದ್ದಲ್ಲಿ ಬರುವ ಅಧಿವೇಶನದಲ್ಲಿ ಈ ವರದಿ ಮಂಡಿಸಬೇಕು ಎಂದು ಸವಾಲು ಹಾಕಿದರು.
ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಮೇಯರ್ ಪ್ರೀತಿ ಕಾಮಕರ, ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಲಕ್ಷ್ಮಣ ತಪಸಿ, ಸಂತೋಷ ಹಡಪದ, ವಿವೇಕಾನಂದ ಛಬ್ಬಿ, ಶೇಖರಗೌಡ ಮೊದಗಿ ಸುದ್ದಿಗೋಷ್ಠಿಯಲ್ಲಿದ್ದರು.
"

ಕಾಣಿಕೆ ಕಳ್ಳರಿಗೆ ಶಿಕ್ಷೆಯಾಗಲಿ ಕರ್ನಾಟಕದ ಗಾಳಿ ಆಂಜನೇಯ ದೇವಸ್ಥಾನದಿಂದ ಹಿಡಿದು ಅಯೋಧ್ಯೆಯ ಶ್ರೀೀರಾಮ ಮಂದಿರದವರೆಗೂ ಕಾಣಿಕೆ ಕಳ್ಳರಿದ್ದಾರೆ. ಅವರನ್ನೆಲ್ಲ ಬಂಧನ ಮಾಡಿ ನಿರ್ದಾಕ್ಷಿಣ್ಯ ಕ್ರಮವಾಗಬೇಕು. ಈಗಾಗಲೇ ಬಡ್ಡಿ ಸಮೇತ ವಸೂಲಿ ಮಾಡುವುದಾಗಿ ಯೋಗಿ ಆದಿತ್ಯನಾಥ ಹೇಳಿರುವುದನ್ನು ಸ್ವಾಗತಿಸುತ್ತೇವೆ. ಇದರ ಜತೆಗೆ ರಾಮ ಕಾಲ್ಪನಿಕ ಎಂದವರು, ರಾಮಮಂದಿರ ಶಿಲಾನ್ಯಾಸ ವೇಳೆ ಕಪ್ಪು ಬಟ್ಟೆ ಧರಿಸಿದವರೆಲ್ಲ ಈಗ ರಾಮಜಪ ಹಾಗೂ ಆರ್‌ಎಸ್‌ಎಸ್ ಜಪ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.