ಬೆಳಗಾವಿಯಲ್ಲಿ ಗುರುವಾರ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಳಗಾವಿ : ಇಲ್ಲಿಂದ ಓಡಾಡುತ್ತಿರುವ ವಿಮಾನಗಳ ಕಡಿತ ನಿಲ್ಲಿಸಬೇಕು. ಈಗ ರದ್ದಾಗಿರುವ ಮುಂಬೈ ವಿಮಾನ ಪುನರ್ ಆರಂಭಿಸಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ತಿಳಿಸಿದರು.
ಉದ್ಯಮಬಾಗದಲ್ಲಿನ ಸಂಘದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನಯಾನ ಪ್ರಾಧಿಕಾರದ ನಿರ್ಧಾರಗಳಿಂದ ಈ ಭಾಗದ ಉದ್ಯಮಿಗಳು, ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈಗಾಗಲೇ ಈ ಸಂಬಂಧ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಮುಂದಿನ ವಾರ ಈ ಸಂಬಂಧ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಜ.15ರ ಬಳಿಕ ಕೇಂದ್ರ ವಿಮಾನಯಾನ ಸಚಿವರು, ರೈಲ್ವೆ ಸಚಿವರು ಹಾಗೂ ಹಣಕಾಸು ಸಚಿವರನ್ನೂ ಭೇಟಿ ಮಾಡಿ, ನಮಗೆ ಆಗುತ್ತಿರುವ ತೊಂದರೆಗಳನ್ನು ಮನವರಿಕೆ ಮಾಡಿಕೊಟ್ಟು ಮನವಿ ಸಲ್ಲಿಸಲಿದ್ದೇವೆ. ಈ ಸಂಬಂಧ ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಚರ್ಚೆ ಮಾಡುತ್ತಿದ್ದೇವೆ. ಉಡಾನ್ ಯೋಜನೆ ಸ್ಥಗಿತವಾದ ನಂತರ ಬೇರೆ ವಿಮಾನ ನಿಲ್ದಾಣಗಳಿಗೆ ತೊಂದರೆಯಾಗದಿದ್ದರೂ ಬೆಳಗಾವಿಗೆ ಮಾತ್ರ ಬಹಳ ತೊಂದರೆಯಾಗುತ್ತಿದೆ. ವಿವಿಧ ಉದ್ಯಮಗಳಿಗೆ, ರಫ್ತುದಾರರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂದರು.
ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರೆ ಮಾತನಾಡಿ, ಕೆಲವು ರಾಜಕೀಯ ಪ್ರಭಾವದಿಂದಾಗಿ ನಮ್ಮ ನಗರದೊಂದಿಗೆ ಸಂಪರ್ಕದಲ್ಲಿದ್ದ ವಿಮಾನಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಸಂಶಯವಿದೆ. ಇದನ್ನು ಮನಗಂಡು ಸ್ಥಳೀಯ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಈಗ ಓಡಾಡುತ್ತಿರುವ ವಿಮಾನಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಟಿಕೆಟ್ ದರಕ್ಕೆ ನಮಗೆ ಯಾವುದೇ ಸಬ್ಸಿಡಿ, ರಿಯಾಯಿತಿ ಬೇಕಿಲ್ಲ. ಎಷ್ಟೆ ದರವಿರಲಿ, ಮೊದಲು ವಿಮಾನ ಕೊಡಿ, ನಾವು ಪಾವತಿ ಮಾಡುವಷ್ಟು ಶಕ್ತರಿದ್ದೇವೆ ಎಂದರು.
ಸಂಘದ ಗೌರವ ಕಾರ್ಯದರ್ಶಿ ಸತೀಶ ಕುಲಕರ್ಣಿ, ಲಘು ಉದ್ಯೋಗ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ಸಚಿನ ಸಬ್ನಿಸ್, ಜಿಲ್ಲಾ ಅಧ್ಯಕ್ಷ ಮಹೇಶ ಇನಾಮದಾರ, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಅಜಯ ಪೈ, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ನಿತಿನ ಲಾಂಡಗೆ ಇತರರಿದ್ದರು.