ಬೆಳಗಾವಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಭಾಕರ ನಾಗರಮುನೋಳಿ ಮಾತನಾಡಿದರು. ರಾಮ ಭಂಡಾರೆ, ಸತೀಶ ಕುಲಕರ್ಣಿ, ಸಚಿನ ಸಬ್ನಿಸ್, ಅಜಯ ಪೈ ಇತರರಿದ್ದರು. 
ಬೆಳಗಾವಿ

ವಾಯುಯಾನ ಸಂಪರ್ಕ ಕಡಿತಕ್ಕೆ ವಾಣಿಜ್ಯೋದ್ಯಮಿಗಳ ಆಕ್ರೋಶ

ಬೆಳಗಾವಿ: ಸಾಂಬ್ರಾ ನಿಲ್ದಾಣದಿಂದ ವಿಮಾನಗಳ ಕಡಿತ ಮಾಡುವುದನ್ನು ನಿಲ್ಲಿಸಬೇಕು. ರದ್ದಾಗಿರುವ ಮುಂಬೈ ವಿಮಾನ ಪುನರಾರಂಭಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಎಚ್ಚರಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಮಾನಯಾನ ಪ್ರಾಧಿಕಾರಕ್ಕೆ ಮನವಿ ಮಾಡಿದ್ದು, ಸ್ಪಂದನೆ ಸಿಗುತ್ತಿಲ್ಲ. ಮುಂದಿನ ವಾರ ಈ ಸಂಬಂಧ ಪ್ರತಿಭಟಿಸಲಾಗುವುದು ಎಂದರು. ಜ.15ರ ಬಳಿಕ ಕೇಂದ್ರ ವಿಮಾನಯಾನ, ರೈಲ್ವೆ ಹಾಗೂ ಹಣಕಾಸು ಸಚಿವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗುವುದು.
ಈ ಸಂಬಂಧ ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಚರ್ಚೆ ಮಾಡುತ್ತಿದ್ದೇವೆ ಎಂದರು. ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರೆ ಮಾತನಾಡಿ, ರಾಜಕೀಯ ಪ್ರಭಾವದಿಂದಾಗಿ ನಗರದೊಂದಿಗೆ ಸಂಪರ್ಕದಲ್ಲಿದ್ದ ವಿಮಾನಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಸಂಶಯವಿದೆ. ಸ್ಥಳೀಯ ಜನಪ್ರತಿನಿಧಿಗಳು ಒಗ್ಗಟ್ಟಾಗಿ ವಿಮಾನಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಸಂಘದ ಗೌರವ ಕಾರ್ಯದರ್ಶಿ ಸತೀಶ ಕುಲಕರ್ಣಿ, ಲಘು ಉದ್ಯೋಗ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ಸಚಿನ ಸಬ್ನಿಸ್, ಜಿಲ್ಲಾಧ್ಯಕ್ಷ ಮಹೇಶ ಇನಾಮದಾರ, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಅಜಯ ಪೈ, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ನಿತಿನ ಲಾಂಡಗೆ ಇತರರಿದ್ದರು.