ಅಥಣಿ ಗುಂಜಿಗಾವಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಡಾ.ಆನಂದ ಗುಂಜಿಗಾವಿ, ಡಾ.ಸಿದ್ದು ಸಂಕ್ರಟ್ಟಿ, ಸೋಮು ವಾಂಗಿ, ಸಚಿನ ದೇಸಾಯಿ ಇತರರಿದ್ದರು.
ತಾಯಿಹಾಲು ಮಗುವಿಗೆ ಆರೋಗ್ಯ ಸಂಜೀವಿನಿಯಾಗಿದೆ. ಇದರಿಂದ ಮಕ್ಕಳು ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಸ್ತ್ರೀರೋಗ ತಜ್ಞವೈದ್ಯೆ ಡಾ.ರೋಹಿಣಿ ಗುಂಜಿಗಾವಿ ಹೇಳಿದರು.
ಸ್ಥಳೀಯ ರೋಟರಿ ಕ್ಲಬ್ ಮತ್ತು ಇನ್ನರವೀಲ್ ಕ್ಲಬ್ ಸಹಯೋಗದಲ್ಲಿ ಗುಂಜಿಗಾವಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ತನ್ಯಪಾನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯ್ತನ ಎನ್ನುವುದು ಸೌಭಾಗ್ಯ. ಅದರಂತೆ ಮಕ್ಕಳ ಪಾಲನೆ, ಪೋಷಣೆ ಅಷ್ಟೇ ಜವಾಬ್ದಾರಿಯಾಗಿದೆ. ಮಗುವಿಗೆ ಬಾಟಲ್ ಹಾಲು ತಪ್ಪಿಸಿ ತಾಯಿಹಾಲು ಉಣಿಸುವುದು ಅಗತ್ಯವಾಗಿದೆ ಎಂದರು.
ಅಥಣಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ಸಿದ್ದು ಸಂಕ್ರಟ್ಟಿ ಮಾತನಾಡಿ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲು ಮತ್ತು ಅಂಗವೈಕಲ್ಯದಿಂದ ಪಾರಾಗಲು ತಾಯಿಹಾಲು ಮಕ್ಕಳಿಗೆ ಕುಡಿಸಬೇಕು. ಹಸಿರು ತರಕಾರಿ, ಮೊಳಕೆ ಕಾಳು ಆಹಾರದಲ್ಲಿ ಬಳಸಬೇಕು. ತಾಯಂದಿರು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಎಂದರು.
ಚಿಕ್ಕಮಕ್ಕಳ ತಜ್ಞವೈದ್ಯ ಡಾ.ಆನಂದ ಗುಂಜಿಗಾವಿ ಮಾತನಾಡಿ, ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಮಗುವನ್ನು ಅಕ್ಕರೆ, ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು ವಿತರಿಸಿದರು. ರೋಟರಿ ಕಾರ್ಯದರ್ಶಿ ಸೋಮು ವಾಂಗಿ, ಖಜಾಂಚಿ ಪ್ರಫುಲ್ ಪಡನಾಡ, ಸದಸ್ಯರಾದ ಸಚಿನ ದೇಸಾಯಿ, ಶೇಖರ ಕೋಲಾರ, ಅರುಣ ಸೌದಾಗರ, ಡಾ.ಮನೀಷಾ ಸಂಕ್ರಟ್ಟಿ, ಕವಿತಾ ವಾಂಗಿ, ಡಾ.ಅಕ್ಷತಾ ಪಡನಾಡ, ಡಾ.ಪ್ರಿಯಾ ಚಿಮ್ಮಡ ಇತರರಿದ್ದರು.